ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆ ಕೋರಿಕೆ ಮತ್ತು ಸಿಬಿಐ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪನ್ನ ಕಾಯ್ದಿರಿಸಿದೆ.
ಸೌಜನ್ಯಾಳ ತಂದೆ ಚಂದಪ್ಪ ಗೌಡ, ಖುಲಾಸೆಗೊಂಡಿರುವ ಕಾರ್ಕಳ ತಾಲೂಕಿನ ಕುಕ್ಕುಂದೂರಿನ ಸಂತೋಷ್ ರಾವ್ ಹಾಗೂ ಸಿಬಿಐ ಪ್ರತ್ಯೇಕವಾಗಿ ಸಲ್ಲಿಸಿರುವ ಮೂರು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ಪೀಠ ನಡೆಸಿದೆ.
ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿ ಕೇಂದ್ರೀಯ ತನಿಖಾ ದಳದ (ಸಿಬಿಐ) ವಿಶೇಷ ಮಕ್ಕಳ ನ್ಯಾಯಾಲಯ ನೀಡಿದ್ದ ತೀರ್ಪು ಪ್ರಶ್ನಿಸಿ ಸಿಬಿಐ ಅರ್ಜಿ ಸಲ್ಲಿಸಿದ್ದು, ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 376 (ಅತ್ಯಾಚಾರ) ಆರೋಪದ ಅಡಿ ಸಂತೋಷ್ ರಾವ್ ಅವರನ್ನು ದೋಷಿ ಎಂದು ಆದೇಶಿಸಬೇಕು ಎಂದು ಕೋರಿದೆ.
ಇನ್ನು, ವಿಚಾರಣಾಧೀನ ನ್ಯಾಯಾಲಯದಲ್ಲಿ ಖುಲಾಸೆಗೊಂಡಿರುವ ಸಂತೋಷ್ ರಾವ್ ಅವರು ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ನಡೆಸುವ ಮೂಲಕ ನೈಜ ಆರೋಪಿಗಳನ್ನು ಪತ್ತೆ ಹಚ್ಚಲು ಚೆನ್ನೈನ ಸಿಬಿಐಗೆ ನಿರ್ದೇಶಿಸಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ
ಸಂತೋಷ್ ರಾವ್ ಮತ್ತು ಸೌಜನ್ಯ ತಂದೆ ಚಂದಪ್ಪ ಗೌಡ ಅವರು ಪ್ರಕರಣದ ಮರು ತನಿಖೆಗೆ ಮನವಿ ಮಾಡಿದ್ದಾರೆ. ಈ ಹಿಂದೆ ಸೌಜನ್ಯ ತಂದೆಯೇ ಮರು ತನಿಖೆಗೆ ಕೋರಿದ್ದರು. ಈ ವಿಚಾರವನ್ನು ಹಿಂದೆಯೇ ಹೈಕೋರ್ಟ್ನ ಬೇರೊಂದು ಪೀಠ ನಿರ್ಧರಿಸಿದ್ದು, ಮರು ತನಿಖೆಗೆ ನಿರಾಕರಿಸಿತ್ತು. ಈಗ ಅದೇ ಪರಿಹಾರ ಕೋರಲಾಗದು. ಪ್ರಕರಣದಲ್ಲಿ ಆರೋಪಿಯಾಗಿರುವ ಸಂತೋಷ್ ಯಾರು ಎಂದು ತನಿಖೆ ನಡೆಸಬೇಕು ಎಂದು ಕೋರಲಾಗದು ಎಂಬ ಸಿಬಿಐ ವಾದ ಹಾಗೂ ಇದಕ್ಕೆ ಪ್ರತಿವಾದ ಆಲಿಸಿದ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿದೆ.