ನಗರಗಳು ವಿಸ್ತರಿಸಿದಂತೆ, ಪ್ರಪಂಚ ಅಭಿವೃದ್ಧಿಯತ್ತ ಸಾಗುತ್ತಿದ್ದಂತೆ ಜನರು ಸ್ವಂತ ವಾಹನಗಳನ್ನು ಖರೀದಿಸಿ ಅದರಲ್ಲೇ ಓಡಾಡಲು ಆರಂಭಿಸಿದ್ದಾರೆ. ಇದರಿಂದ ಹೆಚ್ಚಿನವರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಕೆ ಮಾಡುವುದನ್ನೇ ನಿಲ್ಲಿಸಿದ್ದಾರೆ. ಹೀಗೆ ರಸ್ತೆಗಳಲ್ಲಿ ಹೆಚ್ಚು ಹೆಚ್ಚು ವಾಹನಗಳ ಓಡಾಟ ಹೆಚ್ಚಾದಂತೆ ವಾಹನಗಳು ಸೂಸುವ ಹೊಗೆ, ಹಾರ್ನ್ ಸದ್ದುಗಳಿಂದ ಪರಿಸರ ಮಾಲಿನ್ಯ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ. ಅಲ್ಲದೆ ಟ್ರಾಫಿಕ್ ಸಮಸ್ಯೆಗಳು ಕೂಡಾ ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಯ ಮೂಲ ಉದ್ದೇಶವನ್ನು ಇಟ್ಟುಕೊಂಡು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸಲು ಜನರನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿವರ್ಷ ನವೆಂಬರ್ 10 ರಂದು ವಿಶ್ವ ಸಾರ್ವಜನಿಕ ಸಾರಿಗೆ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ.
ನಗರಗಳು ವಿಸ್ತರಿಸಿದಂತೆ ಮತ್ತು ಕಾರು ಅಥವಾ ಸ್ವಂತ ವಾಹನ ಬಳಕೆ ಹೆಚ್ಚಾದಂತೆ ಸಂಚಾರ ದಟ್ಟಣೆ, ವಾಯು ಮಾಲಿನ್ಯ ಮತ್ತು ಸಂಪನ್ಮೂಲಗಳ ಸವಕಳಿಯಂತಹ ಸಮಸ್ಯೆಗಳು ಕೂಡಾ ಹೆಚ್ಚಾದವು. ಹೀಗೆ ನಗರೀಕರಣದಿಂದ ಉಂಟಾದ ಈ ಸಮಸ್ಯೆಗಳಿಂದ ಪರಿಸರವನ್ನು ರಕ್ಷಿಸಲು ಜನರು ಹೆಚ್ಚಾಗಿ ಸಾರ್ವಜನಿಕ ವಾಹನಗಳನ್ನು ಉಪಯೋಗಿಸಬೇಕು ಎಂದು ಜಾಗೃತಿ ಮೂಡಿಸಲು 2000 ರ ದಶಕದ ಆರಂಭದಲ್ಲಿ ಮೊದಲ ಬಾರಿಗೆ ವಿಶ್ವ ಸಾರ್ವಜನಿಕ ಸಾರಿಗೆ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ನವೆಂಬರ್ 10 ರಂದು ವಿಶ್ವ ಸಾರಿಗೆ ದಿನವನ್ನು ಆಚರಿಸುತ್ತಾ ಬರಲಾಗುತ್ತದೆ.
ಇದನ್ನು ಓದಿ:ರೈತರಿಗೆ ನೀಡಿದ್ದ ವಕ್ಫ್ ನೋಟಿಸ್ ವಾಪಸ್ಗೆ ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ!
ವಿಶ್ವ ಸಾರ್ವಜನಿಕ ಸಾರಿಗೆ ದಿನವು ಮಹತ್ವದ್ದಾಗಿದೆ ಏಕೆಂದರೆ ಸಾರ್ವಜನಿಕ ಸಾರಿಗೆಯು ಜನರಿಗೆ ಮಾತ್ರವಲ್ಲದೆ ಪರಿಸರಕ್ಕೂ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ನಮಗೆ ನೆನಪಿಸುತ್ತದೆ. ನಾವು ಸ್ವಂತ ವಾಹನಗಳನ್ನು ಬಳಸುವ ಬದಲು ನಮ್ಮ ದಿನನಿತ್ಯದ ಓಡಾಟಕ್ಕೆ ರೈಲು, ಮೆಟ್ರೋ, ಬಸ್ಗಳಂತಹ ಸಾರ್ವಜನಿಕ ಸಾರಿಗೆಯನ್ನು ಬಳಸುವುದರಿಂದ ರಸ್ತೆಯಲ್ಲಿ ವಾಹನಗಳ ಓಡಾಟದ ಸಂಖ್ಯೆಯೂ ಕಡಿಮೆಯಾಗುತ್ತದೆ. ಇದು ಮಾಲಿನ್ಯವನ್ನು ಕಡಿಮೆ ಮಾಡಿ ಉತ್ತಮ ಗುಣಮಟ್ಟದ ಗಾಳಿಯನ್ನು ನೀಡುವುದು ಮಾತ್ರವಲ್ಲದೆ ಇಂಧನದಂತಹ ನೈಸರ್ಗಿಕ ಸಂಪನ್ಮೂಲಗಳ ಉಳಿವಿಗೂ ಕಾರಣವಾಗುತ್ತದೆ.
ಇದನ್ನು ಓದಿ:ಬಾಹ್ಯಾಕಾಶದಲ್ಲಿ ಸಿಲುಕಿರುವ ಸುನಿತಾ ವಿಲಿಯಮ್ಸ್ಗೆ ಆರೋಗ್ಯ ಸಮಸ್ಯೆ?
ಜನರು ಸಾರ್ವಜನಿಕ ಸಾರಿಗೆಗಳ ಬದಲು ಸ್ವಂತ ವಾಹನಗಳನ್ನು ಉಪಯೋಗಿಸಿದಾಗ ವಿಷಕಾರಿ ಹೊಗೆಗಳು ಹೊರಸೂಸಿ ಹಾಗೂ ಶಬ್ದಗಳಿಂದ ಪರಿಸರ ಮಾಲಿನ್ಯವಾಗುವುದು ಮಾತ್ರವಲ್ಲದೆ ಇದು ಟ್ರಾಫಿಕ್ ಜಾಮ್ ಸಮಸ್ಯೆ, ಆಕ್ಸಿಡೆಂಟ್ಗಳಂತಹ ಸಮಸ್ಯೆಗಳನ್ನು ಸಹ ಉಂಟು ಮಾಡುತ್ತದೆ. ಹೀಗಿರುವಾಗ ನಾವು ನಮ್ಮ ಸ್ವಂತ ವಾಹನಗಳನ್ನು ಬಳಸುವುದನ್ನು ಬಿಟ್ಟು ನಮ್ಮ ದಿನನಿತ್ಯದ ಓಡಾಟಕ್ಕೆ ರೈಲುಗಳು, ಟ್ಯಾಕ್ಸಿಗಳು, ಬಸ್, ಮೆಟ್ರೋ ಇತ್ಯಾದಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚಾಗಿ ಬಳಕೆ ಮಾಡಲು ಆರಂಭಿಸಿದಾಗ ಟ್ರಾಫಿಕ್ ಜಾಮ್ ಜಾಮ್ ಸಮಸ್ಯೆಯಿಂದ ಹಿಡಿದು ವಾಹನಗಳಿಂದ ಹೊರಸೂಸುವ ವಿಷಕಾರಿ ಹೊಗೆಗಳಿಂದ ಉಂಟಾಗುವ ಮಾಲಿನ್ಯವನ್ನು ಸಹ ಕಡಿಮೆಯಾಗುತ್ತದೆ. ಇದು ಶಬ್ಧ ಮಾಲಿನ್ಯ ಮತ್ತು ವಾಯು ಮಾಲಿನ್ಯಗಳಂತಹ ಮಾಲಿನ್ಯದಿಂದ ಪರಿಸರವನ್ನು ರಕ್ಷಿಸುವುದು ಮಾತ್ರವಲ್ಲದೆ ನೈಸರ್ಗಿಕ ಇಂಧನದ ಮಿತಿಮೀರಿದ ಬಳಕೆಗೂ ಕಡಿವಾಣ ಹಾಕಿದಂತಾಗುತ್ತದೆ. ಈ ಮೂಲಕ ಪರಿಸರ ಸಂರಕ್ಷಣೆಗೆ ನಾವು ಕೊಡುಗೆಯನ್ನು ನೀಡಬಹುದು.