ದೇಶದೆಲ್ಲೆಡೆ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದೆ. ಸಮಸ್ತ ಭಾರತೀಯರು ದೇಶಭಕ್ತಿ ಭಾವ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಅಸಂಖ್ಯಾತ ಹೋರಾಟಗಾರರ ತ್ಯಾಗಬಲಿದಾನಗಳನ್ನ ಸ್ಮರಿಸುತ್ತಿದ್ದಾರೆ. ಹಾಗೆಯೇ ಟೀಂ ಇಂಡಿಯಾದ ಸ್ಟಾರ್ ಆಟಗಾರರೂ ಸಹ ಸ್ವಾತಂತ್ರ್ಯ ದಿನವನ್ನು ವಿಭಿನ್ನವಾಗಿ ಆಚರಿಸಿದ್ದಾರೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ , ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾದ ಮುಖ್ಯಕೋಚ್ ಗೌತಮ್ ಗಂಭೀರ್, ಸ್ಟಾರ್ ವೇಗಿ ಮೊಹಮ್ಮದ್ ಶಮಿ, ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಸೇರಿದಂತೆ ಅನೇಕ ಕ್ರೀಡಾಪಟುಗಳು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಶುಭ ಸಂದೇಶ ಹಂಚಿಕೊಳ್ಳುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ.
ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ 2024ರ ಟಿ20 ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ಬಾರ್ಬಡೋಸ್ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜವನ್ನು ನೆಟ್ಟು ಗಮನ ಸೆಳೆದಿದ್ದರು. ಗುರುವಾರ (ಇಂದು) ಅದೇ ಚಿತ್ರವನ್ನು ಎಕ್ಸ್ ಖಾತೆಯ ಡಿಪಿ ಹಾಕಿಕೊಳ್ಳುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ. ಹಾರ್ದಿಕ್ ಪಾಂಡ್ಯ ಸಹ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರಾಷ್ಟ್ರಧ್ವಜ ಹೊತ್ತು ಮೆರೆದಾಡಿದ ಫೋಟೋವನ್ನ ಹಂಚಿಕೊಂಡಿದ್ದು, ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರಿದ್ದಾರೆ.
ಟೀಂ ಇಂಡಿಯಾದ ಮುಖ್ಯಕೋಚ್ ಗೌತಮ್ ಗಂಭೀರ್ ತಮ್ಮ ಕುಟುಂಬದೊಂದಿಗೆ ಸ್ವಾತಂತ್ರ್ಯ ದಿನವನ್ನ ಸರಳವಾಗಿ ಆಚರಿಸಿದ್ದಾರೆ. ಮನೆಯ ಆವರಣದಲ್ಲೇ ಧ್ಚಜಾರೋಹಣ ನೆರವೇರಿಸಿ ದೇಶದ ಜನತೆಗೆ ಶುಭ ಕೋರಿದ್ದಾರೆ.