ಮಹಿಳೆಯರ ಏಷ್ಯಾಕಪ್ ಟೂರ್ನಿಗಾಗಿ ಶನಿವಾರ ಬಿಸಿಸಿಐ 15 ಮಂದಿಯ ಭಾರತ ತಂಡವನ್ನು ಪ್ರಕಟಿಸಿದೆ. ಟಿ-20 ಮಾದರಿಯಲ್ಲಿ ನಡೆಯಲಿರುವ ಏಷ್ಯಾಕಪ್ 9ನೇ ಆವೃತ್ತಿಯಲ್ಲಿ ಭಾರತ ತಂಡವನ್ನು ಹರ್ಮನ್ಪ್ರೀತ್ ಕೌರ್ ಹಿಂದಿನಂತೆಯೇ ಮುನ್ನೆಡಸಲಿದ್ದಾರೆ. ಅನುಭವಿ ಸ್ಮೃತಿ ಮಂಧಾನ, ದೀಪ್ತಿ ಶರ್ಮಾ ಎಂದಿನಂತೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ ತಂಡದಲ್ಲಿದ್ದರೆ, ಅನುಭವಿ ವೇಗಿಗಳಾದ ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಶ್ರೇಯಾಂಕ ಪಾಟಿಲ್, ಆಶಾ ಶೋಭನಾ, ದಯಾಲನ್ ಹೇಮಲತಾ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಅಮನ್ಜೋತ್ ಕೌರ್ ಮತ್ತು ಅನ್ ಕ್ಯಾಪ್ಡ್ ಯುವ ಆಟಗಾರ್ತಿ ಶಬ್ಬಮ್ ಶಕೀಲ್ ಏಷ್ಯಾಕಪ್ ಸ್ಕ್ಯಾಡ್ ನಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಯುವ ಆಟಗಾರ್ತಿಯರಾದ ಶ್ವೇತಾ ಸೆಹ್ರಾವತ್, ಸೈಕಾ ಇಶಾಕ್, ತನುಜಾ ಕನ್ವರ್ ಮತ್ತು ಮೇಘನಾ ಸಿಂಗ್ ಏಷ್ಯಾಕಪ್ ತಂಡದ ಮೀಸಲು ಆಟಗಾರ್ತಿಯರಾಗಿದ್ದಾರೆ. ಭಾರತವು ಜುಲೈ 19 ರಂದು ಪಾಕಿಸ್ತಾನದ ವಿರುದ್ಧ ರಣಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸುತ್ತದೆ.