ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20ಯಿಂದ ನಿವೃತ್ತಿ ಪಡೆದ ಕಾರಣ, ಭಾರತ ಟಿ20 ತಂಡಕ್ಕೆ ಹೊಸ ನಾಯಕನನ್ನು ನೇಮಿಸುವ ಜವಾಬ್ದಾರಿ ಬಿಸಿಸಿಐ ಮುಂದಿದೆ. ಕಳೆದ ವರ್ಷ ಹಾರ್ದಿಕ್ ಪಾಂಡ್ಯರನ್ನೇ ಭವಿಷ್ಯದ ನಾಯಕ ಎಂದು ಬಿಂಬಿಸಿದ್ದ ಬಿಸಿಸಿಐ, ಇದೀಗ ಅವರನ್ನು ಪೂರ್ಣಾವಧಿ ನಾಯಕನನ್ನಾಗಿ ನೇಮಿಸಲು ಮೀನಮೇಷ ಎಣಿಸುತ್ತಿದೆ. ಇದಕ್ಕೆ ಹಾರ್ದಿಕ್ ಫಿಟ್ಟೆಸ್ ಸಮಸ್ಯೆಯೇ ಪ್ರಮುಖ ಕಾರಣ ಎಂದು ಗೊತ್ತಾಗಿದ್ದು, ಸೂರ್ಯಕುಮಾರ್ ಯಾದವ್ ಹೆಗಲಿಗೆ ನಾಯಕತ್ವದ ಹೊಣೆ ಹೊರಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಹಾರ್ದಿಕರನ್ನು ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ20 ವಿಶ್ವಕಪ್ಗೆ ಉಪನಾಯಕನನ್ನಾಗಿ ನೇಮಿಸಲಾಗಿತ್ತು. ಆದರೂ, ಅವರು ತಮ್ಮ 8 ವರ್ಷಗಳ ವೃತ್ತಿಬದುಕಿನಲ್ಲಿ ಹಲವು ಬಾರಿ ಗಾಯದ ಸಮಸ್ಯೆಗೆ ತುತ್ತಾಗಿ ತಂಡದಿಂದ ಹೊರಗುಳಿದಿದ್ದಾರೆ. ಪಾಂಡ್ಯ ನೇಮಕಕ್ಕೆ ಬಿಸಿಸಿಐನ ಕೆಲ ಪ್ರಮುಖ ಅಧಿಕಾರಿಗಳು ಹಾಗೂ ಆಯ್ಕೆ ಸಮಿತಿಯ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇನ್ನು ಹೊಸ ಕೋಚ್ ಗೌತಮ್ ಗಂಭೀರ್ ಕೂಡ ಪಾಂಡ್ಯ ಮೂರೂ ಮಾದರಿ ಯಲ್ಲಿ ಆಡದೆ ಇರುವುದಕ್ಕೆ ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು. ಹಾರ್ದಿಕರನ್ನು ನಾಯಕನನ್ನಾಗಿ ನೇಮಿಸಲು ಗಂಭೀರ್ಗೂ ಮನಸಿಲ್ಲ ಎಂದು ಹೇಳಲಾಗುತ್ತಿದೆ. ಸೂರ್ಯಕುಮಾರ್ ಟಿ20ಯಲ್ಲಿ ತಂಡದ ನಂಬರ್ 1 ಬ್ಯಾಟರ್ಎನಿಸಿದ್ದು, ಈಗಾಗಲೇ ಒಮ್ಮೆ ನಾಯಕನಾಗಿ ಕಾರ್ಯನಿರ್ವಹಿಸಿದ್ದಾರೆ. ಅವರನಾಯಕತ್ವಶೈಲಿ ಬಗ್ಗೆ ಡ್ರೆಸ್ಸಿಂಗ್ ರೂಂನಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನಲಾಗಿದೆ. ಸೂರ್ಯ ಕಾರ್ಯವೈಖರಿ ಬಗ್ಗೆ ಬಿಸಿಸಿಐ ಹಾಗೂ ಆಯ್ಕೆ ಸಮಿತಿಗೂ ಸಮಾಧಾನವಿದ್ದು, ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು ಎಂದು ಭಾರತೀಯ ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗುತ್ತಿದೆ.