ಬಿಸಿಸಿಐ ಕಾರ್ಯದರ್ಶಿಯಾಗಿರುವ ಜಯ್ ಶಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನ ನೂತನ ಮುಖ್ಯಸ್ಥರಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಶುಕ್ರವಾರದಿಂದ ಕೊಲಂಬೊದಲ್ಲಿ 4 ದಿನಗಳ ಐಸಿಸಿ ವಾರ್ಷಿಕ ಮಹಾಸಭೆ ಆರಂಭ ಗೊಳ್ಳಲಿದ್ದು, ಸಭೆಯಲ್ಲಿ ನೂತನ ಮುಖ್ಯಸ್ಥರ ಆಯ್ಕೆ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಸಭೆಯಲ್ಲಿ ಜಯ್ ಶಾ ಕೂಡಾ ಪಾಲ್ಗೊಳ್ಳಲಿದ್ದಾರೆ. ಸದ್ಯ ನ್ಯೂಜಿಲೆಂಡ್ನ ಗ್ರೆಕ್ ಬಾರ್ಕ್ಲೆ ಐಸಿಸಿ ಮುಖ್ಯಸ್ಥರಾಗಿದ್ದಾರೆ. ಅವರ ಅವಧಿ ಈ ವರ್ಷದ ಕೊನೆವರೆಗೆ ಇದೆ. ಅವರು 3ನೇ ಅವಧಿಗೆ ಅಂದರೆ 2024 ಡಿಸೆಂಬರ್ನಿಂದ 2026ರ ಡಿಸೆಂಬರ್ ವರೆಗೆ ಅಧಿಕಾರ ವಹಿಸುವ ಅವಕಾಶವಿದೆ. ಅತ್ತ ಜಯ್ ಶಾ ಅವರ ಬಿಸಿಸಿಐ ಕಾರ್ಯದರ್ಶಿ ಅವಧಿ 2025ರ ವರೆಗೂ ಇದೆ. ಒಂದು ವೇಳೆ ಶಾ ಬಿಸಿಸಿಐ ಕಾರ್ಯದರ್ಶಿ ಹುದ್ದೆ ತೊರೆದು ಮುಂದಿನ ವರ್ಷ ಐಸಿಸಿ ಮುಖ್ಯಸ್ಥನಾಗಲು ಬಯಸಿದರೆ, ಬಾರ್ಕ್ 3ನೇ ಅವಧಿ ಪೂರ್ತಿಗೊಳಿಸುವ ಸಾಧ್ಯತೆ ಕಡಿಮೆ. ಬದಲಾಗಿ 2025ರಲ್ಲಿ ಜಯ್ ಶಾಗೆ ಸ್ಥಾನ ಬಿಟ್ಟುಕೊಡುವ ಸಾಧ್ಯತೆಯಿದೆ. ಈ ಬಗ್ಗೆ ವಾರ್ಷಿಕ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.