9ನೇ ಆವೃತ್ತಿಯ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ತಂಡಕ್ಕೆ ಬಿಸಿಸಿಐ ಬರೋಬ್ಬರಿ 125 ಕೋಟಿ ರೂಗಳನ್ನು ಬಹುಮಾನವಾಗಿ ಘೋಷಿಸಿ ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದೆ. ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿದ ರೋಹಿತ್ ಪಡೆ ದಾಖಲೆಯ ಎರಡನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿಹಿಡಿದಿದೆ. ಈ ಚಾಂಪಿಯನ್ ಪ್ರದರ್ಶನಕ್ಕೆ ಟೀಂ ಇಂಡಿಯಾ ಐಸಿಸಿಯಿಂದ ಒಟ್ಟಾರೆಯಾಗಿ 22.76 ಕೋಟಿ ರೂಪಾಯಿಗಳನ್ನು ಬಹುಮಾನದ ರೂಪದಲ್ಲಿ ಪಡೆದುಕೊಂಡಿತ್ತು. ಇದರ ಜೊತೆಗೆ ಬಿಸಿಸಿಐ ಬರೋಬ್ಬರಿ 125 ಕೋಟಿ ರೂಗಳನ್ನು ಬಹುಮಾನವಾಗಿ ಘೋಷಿಸಿದೆ.
ಟೀಮ್ ಇಂಡಿಯಾಕ್ಕೆ ದಾಖಲೆಯ 125 ಕೋಟಿ ಬಹುಮಾನವನ್ನು ಘೋಷಿಸಿರುವ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಜಯ್ ಶಾ, ಚಾಂಪಿಯನ್ ಭಾರತ ತಂಡಕ್ಕೆ 125 ಕೋಟಿ ರೂಗಳನ್ನು ಬಹುಮಾನವಾಗಿ ಘೋಷಿಸಿರುವುದಕ್ಕೆ ನನಗೆ ಸಂತೋಷವಾಗಿದೆ. ಪಂದ್ಯಾವಳಿಯುದ್ದಕ್ಕೂ ತಂಡವು ಪ್ರತಿಭೆ, ದೃಢತೆ ಮತ್ತು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದೆ. ಅತ್ಯುತ್ತಮ ಪ್ರದರ್ಶನ ನೀಡಿದ ಎಲ್ಲಾ ಆಟಗಾರರು, ತರಬೇತುದಾರರು ಮತ್ತು ಅಭಿಮಾನಿಗಳಿಗೆ ಅಭಿನಂದನೆಗಳು ಎಂದು ಜಯ್ ಶಾ ಬರೆದುಕೊಂಡಿದ್ದಾರೆ.