ಪಾಕಿಸ್ತಾನದಲ್ಲಿ ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ಚಾಂಪಿಯನ್ ಟ್ರೋಫಿ ಪಂದ್ಯಗಳು ನಡೆಯಬೇಕಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ವಿಶ್ವಕಪ್ ರನ್ನರ್ ಅಪ್ ಆಗಿರುವ ಭಾರತವೂ ಆಡಬೇಕು. ಭಾರತ ಆಡಿದರೆ ನಷ್ಟದಲ್ಲಿ ನರಕ ಕಾಣುತ್ತಿರುವ ಪಾಕಿಸ್ತಾನ ಕ್ರಿಕೆಟ್, ಈಗ ಟೂರ್ನಿ ಕೈತಪ್ಪಿದರೆ 54,90,00,00,00 ನಷ್ಟ ಅನುಭವಿಸುವ ಭೀತಿಯಲ್ಲಿದೆ. ಅಂದರೆ ಭಾರತ ಟೂರ್ನಿಯಲ್ಲಿ ಆಡದೇ ಹೋದರೆ, ಪಿಸಿಬಿಗೆ 65 ಮಿಲಿಯನ್ ಡಾಲರ್ (ರೂಪಾಯಿಗಳ ಲೆಕ್ಕದಲ್ಲಿ 550 ಕೋಟಿ) ನಷ್ಟ ಎದುರಿಸಲಿದೆ.
ಇತ್ತೀಚೆಗಷ್ಟೇ ಪಾಕ್ ಕ್ರಿಕೆಟ್ ಮಂಡಳಿ ಮಾಜಿ ಅಧ್ಯಕ್ಷ ರಮೀಜ್ ರಾಜಾ ಭಾರತ ಪಾಕಿಸ್ತಾನದಲ್ಲಿಯೇ ಚಾಂಪಿಯನ್ಸ್ ಟ್ರೋಫಿ ಆಡಬೇಕು. ಇಲ್ಲದೇ ಹೋದರೆ, ಪಾಕಿಸ್ತಾನವೂ ಆಡುವುದಿಲ್ಲ ಎಂಬ ಹೇಳಿಕೆ ಕೊಟ್ಟಿದ್ದರು. ಪಿಸಿಬಿ ವಕ್ತಾರ ಮಹಮ್ಮದ್ ರಿಜ್ವಾನ್ ಪಿಸಿಬಿ, ಭಾರತೀಯ ಆಟಗಾರರನ್ನು ಸ್ವಾಗತಿಸಲು ಸಜ್ಜಾಗಿದೆ. ಆದರೆ ಇದು ನಮ್ಮ ಕೈಲಿಲ್ಲ. ಪಿಸಿಬಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿಲದೆ ಎಂದು ಹೇಳಿದ್ದಾರೆ.
ಟೂರ್ನಿಗೆ ಕೇವಲ ನಾಲ್ಕು ತಿಂಗಳಿರುವಾಗ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ಪಾಕಿಸ್ತಾನದ ಕೈತಪ್ಪುವ ಸಾಧ್ಯತೆ ಇದೆ. ಇದಕ್ಕೆ ಪಾಕಿಸ್ತಾನದ ಹಠವೇ ಕಾರಣ ಎನ್ನಲಾಗಿದ್ದು, ಭಾರತದ ವಿರುದ್ಧ ನಿಲ್ಲಲು ಹೋಗಿ ಪಾಕಿಸ್ತಾನವೇ ನೆಲಕ್ಕೆ ಬೀಳುತ್ತಿರುವ ರೀತಿ ಕಾಣುತ್ತಿದೆ. ತನ್ನ ಮಾತನ್ನ ಕೇಳದಿರುವ ಪಾಕಿಸ್ತಾನಕ್ಕೆ ಈಗ ಐಸಿಸಿ ಶಾಕ್ ನೀಡುವ ಸಾಧ್ಯತೆ ಇದ್ದು, ಟೂರ್ನಿಗಾಗಿ ಈಗಾಗಲೇ ಕೋಟಿ ಕೋಟಿ ಖರ್ಚು ಮಾಡಿರುವ ಪಾಕ್ ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಲಿದೆ.
ಇದನ್ನು ಓದಿ:ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 98 ಮಂದಿ ಪೈಕಿ 97 ಮಂದಿಗೆ ಹೈಕೋರ್ಟ್ ಜಾಮೀನು
ಹೌದು, ಪಾಕಿಸ್ತಾನದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲ್ಲ ಎಂದು ಬಿಸಿಸಿಐ ಈಗಾಗಲೇ ಐಸಿಸಿಗೆ ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆ ಬಿಸಿಸಿಐ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸದೇ ಇರಲು ನಿರ್ಧರಿಸಿದೆ. ಹೀಗಾಗಿ ಐಸಿಸಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸುವಂತೆ ಪಿಸಿಬಿಗೆ ತಿಳಿಸಿದೆ. ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಈ ಶೀತಲ ಸಮರ ಇತ್ಯರ್ಥ್ಯ ಕಾಣದಿದ್ದರೆ ಟೂರ್ನಿಯನ್ನು ಒಂದೋ ದಕ್ಷಿಣ ಆಫ್ರಿಕಾಗೆ ಸ್ಥಳಾಂತರ ಮಾಡುತ್ತೇವೆ, ಇಲ್ಲದಿದ್ದರೆ ಮುಂದೂಡುತ್ತೇವೆ ಎಂದು ಐಸಿಸಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
ಭಾರತ ಒಂದು ವೇಳೆ ಪಾಕಿಸ್ತಾನದಲ್ಲಿ ಆಡಿದ್ದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಇನ್ನೂ ಹಲವು ವರ್ಷಗಳ ಕಾಲ ಆರಾಮವಾಗಿರುವಷ್ಟು ದುಡ್ಡು ಖಾತೆಗೆ ಬರುತ್ತಿತ್ತು. ಹೀಗಾಗಿಯೇ ಭಾರತವನ್ನು ಒಪ್ಪಿಸಲು ಶತ ಪ್ರಯತ್ನ ಪಟ್ಟಿತ್ತು. ಭಾರತ ಹೈಬ್ರಿಡ್ ಮಾದರಿಯಲ್ಲಿ ಮಾಡಿ ಎಂದು ಹೇಳಿದಾಗ ಮೊದಲು ಒಪ್ಪದಿದ್ದ ಪಾಕಿಸ್ತಾನ, ಹೈಬ್ರಿಡ್ ಮಾದರಿಗಾದರೂ ಒಪ್ಪಿಕೊಳ್ಳುವ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಆ ನಿರೀಕ್ಷೆಗೂ ಐಸಿಸಿ ಶಾಕ್ ಕೊಟ್ಟಿದೆ.
ಇದನ್ನು ಓದಿ:ಬುಲ್ಡೋಜರ್ ಕಾನೂನಿಗೆ ಸುಪ್ರೀಂಕೋರ್ಟ್ ಬ್ರೇಕ್!
ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನ ದೊಡ್ಡ ಮಟ್ಟದಲ್ಲಿ ದುಡ್ಡು ಖರ್ಚು ಮಾಡುತ್ತಿದೆ. ಕರಾಚಿ, ಲಾಹೋರ್ ಹಾಗೂ ರಾವಲ್ಪಿಂಡಿ ಕ್ರೀಡಾಂಗಣಗಳನ್ನು ಆಧುನೀಕರಣ ಮಾಡಿದೆ. ಇದಕ್ಕಾಗಿಯೇ ಸುಮಾರು 7 ಮಿಲಿಯನ್ ಡಾಲರ್ ಖರ್ಚು ಮಾಡಿದೆ. ಈಗ ಟ್ರೋಫಿ ರದ್ದಾದರೆ ಅಷ್ಟೂ ವೆಚ್ಚ ನೀರಿನಲ್ಲಿ ಹೋಮ ಮಾಡಿದಂತಾಗಲಿದೆ. ಏಕೆಂದರೆ ಇತ್ತೀಚೆಗೆ ಪಾಕಿಸ್ತಾನದಲ್ಲಿ ದೊಡ್ಡ ದೊಡ್ಡ ದೇಶಗಳು ಕ್ರಿಕೆಟ್ ಆಡುವುದಕ್ಕೆ ಬರುತ್ತಿಲ್ಲ. ಆಸ್ಟ್ರೇಲಿಯ, ನ್ಯೂಜಿಲೆಂಡ್ ಆಡಿದ್ದರೂ, ಪಿಸಿಬಿಗೆ ದೊಡ್ಡ ಮೊತ್ತದ ಲಾಭವೇನೂ ಆಗಿಲ್ಲ. ಪಿಸಿಬಿ ಆರ್ಥಿಕ ಪರಿಸ್ಥಿತಿ ಸರಿ ಹೋಗಬೇಕು ಎಂದರೆ, ಪಾಕಿಸ್ತಾನದಲ್ಲಿ ಭಾರತ ತಂಡ ಕ್ರಿಕೆಟ್ ಆಡಿದರೆ ಮಾತ್ರ ಸಾಧ್ಯ. ಆದರೆ ಈಗ ಲಾಭ ಇರಲಿ, ದೊಡ್ಡ ಮೊತ್ತದ 550 ಕೋಟಿ ನಷ್ಟವಾಗುವ ಭೀತಿ ಎದುರಿಸುತ್ತಿದೆ ಪಾಕಿಸ್ತಾನ.