ವಿರಾಟ್ಕೊಹ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್. ಅಂತಾರಾಷ್ಟ್ರೀಯ ಟಿ-20 ವಿಶ್ವಕಪ್ ನಿಂದ ನಿವೃತ್ತಿಯಾಗಿರುವ ಕಿಂಗ್ ಕೊಹ್ಲಿ ಮುಂಬರುವ ಐಪಿಎಲ್ ನಲ್ಲಿ ಅರ್ಸಿಬಿ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಆರ್ಸಿಬಿ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ ಮತ್ತೆ ಕ್ಯಾಪ್ಟನ್ ಪಟ್ಟಕ್ಕೇರುವ ಸಾಧ್ಯತೆ ದಟ್ಟವಾಗಿದೆ. 2025ಕ್ಕೆ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ 40 ವರ್ಷದ ಫಾಫ್ ಡುಪ್ಲೆಸಿಸ್ ಅವರನ್ನು ಆರ್ಸಿಬಿ ರಿಟೈನ್ ಮಾಡಿಕೊಳ್ಳುವುದು ಅನುಮಾನವಾಗಿದೆ.
ಸತತ 17 ವರ್ಷದಿಂದ ಚಾಂಪಿಯನ್ ಪಟ್ಟ ಅಲಂಕರಿಸಲು ಪ್ರಯತ್ನಿಸುತ್ತಿರುವ ಅರ್ಸಿಬಿ ತಂಡದ ಕನಸು ಈಡೇರುವ ಕಾಲ ಇನ್ನು ಬಂದಿಲ್ಲ, ಫೈನಲ್ ಪ್ರವೇಶಿಸಿ 8 ವರ್ಷಗಳು ಕಳೆದಿವೆ. ಅದರಲ್ಲೂ ಕಳೆದ ಸೀಸನ್ನಲ್ಲಿ 14 ಪಂದ್ಯಗಳಲ್ಲಿ ಕೇವಲ 7 ಮ್ಯಾಚ್ ಮಾತ್ರ ಗೆದ್ದಿದ್ದು, ಹೀಗಾಗಿ ನಾಯಕತ್ವ ಬದಲಾಗೋದು ಖಚಿತ ಎನ್ನಲಾಗುತ್ತಿದೆ. ಕೊಹ್ಲಿ ಮುಂದಾಳತ್ವದಲ್ಲಿ ಅರ್ಸಿಬಿ ಟೀಮ್ ಚಾಂಪಿಯನ್ ಪಟ್ಟಕ್ಕೇರಿ ಈ ಸಲ ಕಪ್ ನಮ್ದೆ ಅನ್ನೊ ಅಭಿಮಾನಿಗಳ ಆಸೆಯನ್ನು ಈಡೇರಿಸಲಿ ಎನ್ನುವುದೇ ಎಲ್ಲರ ಆಶಯವಾಗಿದೆ.
ಈ ಹಿಂದೆ ಟೀಮ್ ಇಂಡಿಯಾ ನಾಯಕತ್ವದ ಹೊರೆಯ ಕಾರಣ ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಈಗ ಎಲ್ಲಾ ಮಾದರಿಯ ನಾಯಕತ್ವದಿಂದ ನಿವೃತ್ತಿ ಹೊಂದಿರುವುದರಿಂದ ಮತ್ತೆ ಆರ್ಸಿಬಿ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ. ನಾಯಕನಾಗಿ 143 ಪಂದ್ಯಗಳಲ್ಲಿ ಮುನ್ನಡೆಸಿರುವ ವಿರಾಟ್ ಕೊಹ್ಲಿ 66 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. ಅಲ್ಲದೆ ಕಿಂಗ್ ಕೊಹ್ಲಿ ನಾಯಕತ್ವದಲ್ಲೇ ಆರ್ಸಿಬಿ 2016 ರಲ್ಲಿ ಫೈನಲ್ಗೆ ಪ್ರವೇಶಿಸಿದರೆ, 3 ಬಾರಿ ಪ್ಲೇಆಫ್ ಆಡಿತ್ತು.