ಇತ್ತೀಚೆಗೆ ಚೆನ್ನೈನ ಎಂ.ಎ ಚಿದಂಬರಂ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಮ್ ಇಂಡಿಯಾ ಬರೋಬ್ಬರಿ 280 ರನ್ಗಳಿಂದ ಗೆದ್ದು ಬೀಗಿದೆ. ಟೀಮ್ ಇಂಡಿಯಾದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದು ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್.
ಮೊದಲ ಟೆಸ್ಟ್ ಪಂದ್ಯದ ಫಸ್ಟ್ ಇನ್ನಿಂಗ್ಸ್ನಲ್ಲಿ ಶತಕ ಹೊಡೆದು ತಂಡಕ್ಕೆ ಆಸರೆಯಾಗಿದ್ದ ಅಶ್ವಿನ್ 2ನೇ ಇನ್ನಿಂಗ್ಸ್ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಟೀಮ್ ಇಂಡಿಯಾ ಪರ 2ನೇ ಇನ್ನಿಂಗ್ಸ್ನಲ್ಲಿ ಅಶ್ವಿನ್ 6 ವಿಕೆಟ್ ಪಡೆದಿದ್ದೇ ಬಾಂಗ್ಲಾ ವಿರುದ್ಧ 280 ರನ್ಗಳ ಬೃಹತ್ ಗೆಲುವಿಗೆ ಕಾರಣ. ಈ ಮೂಲಕ ಇವರು ಟೆಸ್ಟ್ ಕ್ರಿಕೆಟ್ನಲ್ಲಿ ಬರೋಬ್ಬರಿ 37ನೇ ಬಾರಿಗೆ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಪಡೆದ ಶ್ರೇಷ್ಠ ದಾಖಲೆ ಬರೆದರು.
ಇದಾದ ಬಳಿಕ ಮಾತಾಡಿದ ಆರ್. ಅಶ್ವಿನ್, ಇದು ನನಗೆ ದೊಡ್ಡ ಸವಾಲ್. ನಾನು ಸಣ್ಣವನಿದ್ದಾಗ ಹರ್ಭಜನ್ ಸಿಂಗ್ ಬೌಲಿಂಗ್ ಅನ್ನೇ ನಕಲು ಮಾಡುತ್ತಿದ್ದೆ. ನನಗೆ ಭಜ್ಜಿ ಯಾವಾಗಲೂ ಸ್ಫೂರ್ತಿ. ನಾನು ಹರ್ಭಜನ್ ಸಿಂಗ್ ಒಟ್ಟಿಗೆ ಆಡುತ್ತೇವೆ ಎಂದು ಭಾವಿಸಿರಲಿಲ್ಲ. ಐಪಿಎಲ್ನಿಂದ ಬಂದಿದ್ದ ಕಾರಣ ರೆಡ್ ಬಾಲ್ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವೇ ಅನ್ನೋ ಅನುಮಾನ ಇತ್ತು ಎಂದಿದ್ದರು.
ಬಾಂಗ್ಲಾ ವಿರುದ್ಧ 2ನೇ ಇನ್ನಿಂಗ್ಸ್ನಲ್ಲಿ 88 ರನ್ಗಳಿಗೆ 6 ವಿಕೆಟ್ ಪಡೆದು ಟೀಮ್ ಇಂಡಿಯಾ ಗೆಲುವಿಗೆ ನೆರವಾದರು. ಇದರೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 750 ವಿಕೆಟ್ ಪೂರೈಸಿದರು. ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್ ಮತ್ತು ಅನಿಲ್ ಕುಂಬ್ಳೆ ನಂತರ ಈ ಸಾಧನೆ ಮಾಡಿದ 4ನೇ ಸ್ಪಿನ್ನರ್ ಎನಿಸಿಕೊಂಡರು.