ಭಾರತ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 149 ರನ್ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ 11 ಓವರ್ ಬೌಲ್ ಮಾಡಿದ ಬುಮ್ರಾ 50 ರನ್ ನೀಡಿ 4 ವಿಕೆಟ್ ಪಡೆದರು. ಇದರೊಂದಿಗೆ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 400 ವಿಕೆಟ್ ಪೂರೈಸಿದ ಭಾರತದ 10ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಟೀಂ ಇಂಡಿಯಾದಲ್ಲಿ ಪ್ರಸ್ತುತ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸುತ್ತಿರುವ ಬುಮ್ರಾ, ತಂಡದ ಬೌಲಿಂಗ್ ಜೀವಾಳ ಎನಿಸಿಕೊಂಡಿದ್ದಾರೆ. ಹೀಗಾಗಿ ತಂಡದ ಪರ ಮೂರು ಮಾದರಿಯ ಕ್ರಿಕೆಟ್ನಲ್ಲೂ ಕಾಣಿಸಿಕೊಂಡಿರುವ ಯಾರ್ಕರ್ ಕಿಂಗ್ ಇದುವರೆಗೆ ಟೀಂ ಇಂಡಿಯಾ ಪರ ಎಲ್ಲಾ ಮೂರು ಮಾದರಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಭಾರತ ಪರ ಇದುವರೆಗೆ 70 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಬುಮ್ರಾ 89 ವಿಕೆಟ್ ಪಡೆದಿದ್ದರೆ, 36 ಟೆಸ್ಟ್ ಪಂದ್ಯಗಳಲ್ಲಿ 162 ವಿಕೆಟ್ ಹಾಗೂ 89 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 149 ವಿಕೆಟ್ ಪಡೆದಿದ್ದಾರೆ. ಒಟ್ಟಾರೆ, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 400 ವಿಕೆಟ್ಗಳನ್ನು ಪೂರೈಸಿರುವ ಬುಮ್ರಾ ದಿಗ್ಗಜರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನು ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಕಬಳಿಸಿದವರ ಪಟ್ಟಿಯಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಅವರ ಹೆಸರು ಮೊದಲ ಸ್ಥಾನದಲ್ಲಿದೆ. ಜಂಬೂ ಖ್ಯಾತಿಯ ಕುಂಬ್ಳೆ ಒಟ್ಟಾರೆಯಾಗಿ ಆಡಿರುವ 499 ಇನ್ನಿಂಗ್ಸ್ಗಳಲ್ಲಿ 953 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಎರಡನೇ ಸ್ಥಾನದಲ್ಲಿರುವ ಆರ್ ಅಶ್ವಿನ್ 369 ಇನ್ನಿಂಗ್ಸ್ಗಳಲ್ಲಿ 744 ವಿಕೆಟ್ ಪಡೆದಿದ್ದರೆ, ಹರ್ಭಜನ್ ಸಿಂಗ್ 707 ವಿಕೆಟ್ ಉರುಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿರುವ ಕಪಿಲ್ ದೇವ್ ಅವರು 448 ಇನ್ನಿಂಗ್ಸ್ಗಳಲ್ಲಿ 687 ವಿಕೆಟ್ ಪಡೆದಿದ್ದಾರೆ. ಜಹೀರ್ ಖಾನ್ 373 ಇನ್ನಿಂಗ್ಸ್ಗಳಲ್ಲಿ 597 ವಿಕೆಟ್ ಪಡೆದು ಐದನೇ ಸ್ಥಾನದಲ್ಲಿದ್ದಾರೆ.