ಪ್ಯಾರಿಸ್ ಒಲಿಂಪಿಕ್ಸ್ನಿಂದ ಅನರ್ಹಗೊಂಡಿದ್ದ ಸ್ಟಾರ್ ರೆಸ್ಲರ್ ವಿನೇಶ್ ಫೋಗಟ್ ಭಾರತಕ್ಕೆ ಮರಳಿದ ಬಳಿಕ ಚಿನ್ನದ ಪದಕ ಪಡೆದಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ವಿನೇಶ್ ಅವರು ಒಲಿಂಪಿಕ್ಸ್ನಿಂದಲೇ ಅನರ್ಹಗೊಂಡರು, ಅಲ್ಲದೇ ವಿನೇಶ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ (CAS) ವಜಾಗೊಳಿಸಿತ್ತು. ಹಾಗಿದ್ದರೂ ಚಿನ್ನದ ಪದಕ ಸಿಕ್ಕಿದ್ದು ಹೇಗೆ ಅನ್ನೋದು ಅಚ್ಚರಿಯಾಗಿದೆ. ಈ ಬಗ್ಗೆ ಇನ್ನೂ ತಿಳಿಯಿರಿ
ಶನಿವಾರ ಭಾರತಕ್ಕೆ ಮರಳಿದ ಫೋಗಟ್ಗೆ ದೆಹಲಿಯ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿತು. ಅಭಿಮಾನಿಗಳನ್ನು ನೋಡಿ ಫೋಗಟ್ ಭಾವೋದ್ವೇಗಕ್ಕೆ ಒಳಗಾದರು. ಫೋಗಟ್ ಕಣ್ಣಲ್ಲಿ ನೀರು ಉಕ್ಕಿತ್ತು. ಕಾಂಗ್ರೆಸ್ ಸಂಸದ ದೀಪಿಂದರ್ ಹೂಡಾ, ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸಂತೈಸುವ ಕೆಲಸ ಮಾಡಿದರು. ಬಳಿಕ ತೆರೆದ ವಾಹನದಲ್ಲಿ ತಮ್ಮ ಸ್ವಗ್ರಾಮಕ್ಕೆ ತೆರಳಿದರು.
ದೆಹಲಿಯಿಂದ ಬಾಳಲಿಗೆ ಹೋಗುವ ಮಾರ್ಗದಲ್ಲಿ, ಹಲವಾರು ಗ್ರಾಮಗಳಲ್ಲಿ ವಿನೇಶ್ ಬೆಂಬಲಿಗರು ಅವರನ್ನ ಸನ್ಮಾನಿಸಿದರು, 135 ಕಿಮೀ ದೂರದ ಪ್ರಯಾಣವು ಸುಮಾರು 13 ಗಂಟೆಗಳ ಕಾಲ ತೆಗೆದುಕೊಂಡಿತು. ಬಳಿಕ ಅವರ ಹುಟ್ಟೂರು ಬಾಳಲಿಯಲ್ಲಿ ಸಮುದಾಯದ ಹಿರಿಯರು ಚಿನ್ನದ ಪದಕ ನೀಡಿ ಗೌರವಿಸಿದರು.
ನಿಗದಿಗಿಂತ ತೂಕಕ್ಕಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕೆ ಫೋಗಟ್ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ. ವಿಭಾಗದ ಫೈನಲ್ನಿಂದ ಅನರ್ಹಗೊಳಿಸಲಾಗಿತ್ತು. ಕ್ರೀಡಾಕೂಟದ ಸಂದರ್ಭದಲ್ಲಿ ವಿವಾದ ಪರಿಹಾರಕ್ಕಾಗಿ ವಿಶೇಷವಾಗಿ ಸ್ಥಾಪಿಸಲಾಗಿರುವ ಸಿಎಎಸ್ನ ತಾತ್ಕಾಲಿಕ ವಿಭಾಗಕ್ಕೆ ತಮ್ಮ ವಿರುದ್ಧದ ಕ್ರಮ ಪ್ರಶ್ನಿಸಿ ವಿನೇಶ್ ಆ.9 ರಂದು ಮೇಲ್ಮನವಿ ಸಲ್ಲಿಸಿದ್ದರು.