ಭಾರತ ಮತ್ತು ಬಾಂಗ್ಲಾದೇಶ್ ನಡುವಿನ ಟೆಸ್ಟ್ ಸರಣಿಯು ಇಂದಿನಿಂದ ಶುರುವಾಗಲಿದೆ. 5 ಪಂದ್ಯಗಳ ಈ ಸರಣಿಯಲ್ಲಿ ಮೊದಲು ಎರಡು ಟೆಸ್ಟ್ ಪಂದ್ಯಗಳನ್ನಾಡಲಾಗುತ್ತಿದ್ದು, ಇದಾದ ಬಳಿಕ ಟಿ20 ಸರಣಿ ನಡೆಯಲಿದೆ. ಈ ಸರಣಿಯ ಮೊದಲ ಟೆಸ್ಟ್ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಗುರುವಾರದಿಂದ ಆರಂಭವಾಗಲಿದ್ದು, ಎರಡನೇ ಪಂದ್ಯವು ಸೆಪ್ಟೆಂಬರ್ 27 ರಿಂದ ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ಜರುಗಲಿದೆ.
ಈ ಎರಡು ಟೆಸ್ಟ್ ಪಂದ್ಯಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಭಾಗವಾಗಿರುವ ಕಾರಣ ಉಭಯ ತಂಡಗಳಿಗೆ ಈ ಸರಣಿಯು ತುಂಬಾ ಮಹತ್ವದ್ದು. ಅದರಲ್ಲೂ ಭಾರತ ತಂಡವು ಈ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ಆಡುವುದು ಬಹುತೇಕ ಖಚಿತವಾಗಲಿದೆ. ಹೀಗಾಗಿ ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ ಭರ್ಜರಿ ಜಯ ಸಾಧಿಸುವ ಇರಾದೆಯೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ.
ಮತ್ತೊಂದೆಡೆ ಪಾಕಿಸ್ತಾನ್ ತಂಡದ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದಿರುವ ಬಾಂಗ್ಲಾದೇಶ್ ತಂಡವು ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ರೇಸ್ನಲ್ಲಿದೆ. ಹೀಗಾಗಿ ಭಾರತದ ವಿರುದ್ಧದ ಸರಣಿಯನ್ನು ಗೆಲ್ಲುವ ಮೂಲಕ ಡಬ್ಲ್ಯೂಟಿಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರುವ ವಿಶ್ವಾಸದಲ್ಲಿದೆ.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸರ್ಫರಾಝ್ ಖಾನ್, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ , ಆಕಾಶ್ ದೀಪ್ ಮತ್ತು ಯಶ್ ದಯಾಳ್.