ಟೀಂ ಇಂಡಿಯಾ ಗೆಲ್ಲ ಬೇಕೆಂದರೆ, ಸ್ಟಾರ್ ಆಟಗಾರರು ಎನಿಸಿಕೊಂಡವರು ಅದ್ಭುತವಾಗಿ ಆಟ ಆಡ್ಬೇಕು. ಕ್ಯಾಪ್ಟನ್ ರೋಹಿತ್ ಶರ್ಮಾ ಆಗಲಿ, ಕಿಂಗ್ ಕೊಹ್ಲಿ ಆಗಲಿ, ಸ್ಟಾರ್ ಆಟಗಾರರಷ್ಟೇ ಅಲ್ಲ, ಅನುಭವಿ ಆಟಗಾರರೂ ಹೌದು. ಆದರೆ ಈ ಇಬ್ಬರೂ ಸತತವಾಗಿ ವಿಫಲರಾಗ್ತಾ ಇದ್ದಾಗ, ತಂಡಕ್ಕೆ ಬೇಡ ಎನಿಸಿಕೊಂಡಿದ್ದ ಅದೇ ಕೆ ಎಲ್ ರಾಹುಲ್, ಆಪದ್ಭಾಂಭವನಂತೆ ತಂಡಕ್ಕೆ ರಕ್ಷಣೆ ಕೊಟ್ಟಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಮತ್ತೊಮ್ಮೆ ಹೀನಾಯ ಪ್ರದರ್ಶನ ಕೊಡ್ತಾ ಇದೆ. ಒಬ್ಬ ಜಸ್ ಪ್ರೀತ್ ಬೂಮ್ರಾ ಬಿಟ್ಟರೆ, ಮಿಕ್ಕ ಬೌಲರುಗಳೆಲ್ಲ ಬೌಲಿಂಗ್ ಮರೆತಂತೆ ಆಡ್ತಿದ್ದಾರೆ. ಒಬ್ಬ ಕೆಎಲ್ ರಾಹುಲ್ ಬಿಟ್ಟರೆ, ಉಳಿದ ಆಟಗಾರರಿಂದ ಹೇಳಿಕೊಳ್ಳೋ ಪ್ರದರ್ಶನ ಬರ್ತಾ ಇಲ್ಲ.
ರೋಹಿತ್ ಶರ್ಮಾ ಇತ್ತೀಚೆಗೆ ಆಡಿರುವ ಟೆಸ್ಟ್ ಇನ್ನಿಂಗ್ಸ್ಗಳನ್ನೇ ನೋಡಿ. 6, 5, 8, 23, 2, 52, 0, 8, 18, 11, 3, 3, 6, 10.. ಇದು ಕಳೆದ 14 ಇನ್ನಿಂಗ್ಸುಗಳಲ್ಲಿ ರೋಹಿತ್ ಶರ್ಮಾ ಬ್ಯಾಟಿನಿಂದ ಸಿಡಿದಿರುವ ರನ್ನುಗಳು.
ಕಳೆದ 13 ಟೆಸ್ಟ್ ಇನ್ನಿಂಗ್ಸುಗಳಲ್ಲಿ ಟೋಟಲ್ಲಾಗಿ ಹೊಡೆದಿರುವುದು ಕೇವಲ 152 ರನ್ನು. ಸರಾಸರಿ 11.69.
ರೋಹಿತ್ ಶರ್ಮಾ ಇಷ್ಟೊಂದು ಡಬ್ಬಾ ಆಟಗಾರನಾಗಿಬಿಟ್ರಾ..? ಅಭಿಮಾನಿಗಳ ಆಕ್ರೋಶ ಮುಗಿಲು ಮುಟ್ಟಿದೆ. ಒಂದು ವಿಶ್ವಕಪ್ ಫೈನಲ್ಲಿಗೆ ಹೋಗಿ, ಇನ್ನೊಂದು ವಿಶ್ವಕಪ್ ಗೆಲ್ಲಿಸಿಕೊಡದೇ ಹೋಗಿದ್ದರೆ, ಇಷ್ಟೊತ್ತಿಗೆ ರೋಹಿತ್ ಶರ್ಮಾ ರಿಟೈರ್ ಆಗ್ಭೇಕು ಅನ್ನೋ ಕೂಗು ಕೇಳಿ ಬರ್ತಿತ್ತೇನೋ..
ಇನ್ನು ವಿರಾಟ್ ಕೊಹ್ಲಿ ಲೆಕ್ಕಾಚಾರ ನೋಡಿದ್ರೆ, ಒಂದು ಸೆಂಚುರಿ ಹೊಡೆದಿದ್ರೂ, ಆಟ ಮರೆತವರಂತೆ ಆಡ್ತಿದ್ಧಾರೆ.
ಸ್ಕೋರು 17, 6, 29, 47, 70, 0. 17, 1, 1, 4, 100, 5, 11, 7, 3..
ಜಸ್ಟ್ ಈ ವರ್ಷದ ಸರಾಸರಿ ತಗೊಂಡ್ರೆ, 25.06 ಅಷ್ಟೇ.
ಕೊಹ್ಲಿಯ ಅತೀ ದೊಡ್ಡ ವೀಕ್ ನೆಸ್, ಸ್ಟಂಪ್ನಿಂದ ಆಚೆ ಹೋಗುವ ಬಾಲುಗಳನ್ನು ಕೆಣಕೋದು. ಟೆಸ್ಟ್ ಕ್ರಿಕೆಟ್ಟಿನಲ್ಲಿ ತಾಳ್ಮೆ ಅತೀ ಮುಖ್ಯ. ಅದರಲ್ಲೂ ಹಿರಿಯ ಆಟಗಾರನಾಗಿ, ಜವಾಬ್ದಾರಿಯಿಲ್ಲದ ಹೊಸ ಹುಡುಗರಂತೆ ಆಡುತ್ತಿರುವ ಕೊಹ್ಲಿ, ಫಾರ್ಮ್ ಕಳೆದುಕೊಂಡಿದ್ದಾರೆ.
ಆದರೆ ಈ ಇಬ್ಬರೂ ಸ್ಟಾರ್ ಆಟಗಾರರ ಮಧ್ಯೆ ಆಪದ್ಭಾಂಧವನಾಗಿರುವುದು ಕೆ ಎಲ್ ರಾಹುಲ್. ಕಳೆದ ಒನ್ ಡೇ ವಿಶ್ವಕಪ್ ನಂತರ ತಂಡಕ್ಕೆ ಬೇಡ ಎನಿಸಿಕೊಂಡಿದ್ದ ಕೆ ಎಲ್ ರಾಹುಲ್, ಈಗಾಗಲೇ ಒನ್ ಡೇ ಮತ್ತು ಟಿ-20 ಕ್ರಿಕೆಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.
ಆದರೆ ಟೆಸ್ಟ್ ಕ್ರಿಕೆಟ್ಟಿನಲ್ಲಿ ಅದ್ಭುತವಾಗಿ ಆಡ್ತಿರೋ ಕೆ ಎಲ್ ರಾಹುಲ್, ಪರ್ತ್ ಟೆಸ್ಟಿನಲ್ಲಿ 77, ಬ್ರಿಸ್ಬೇನ್ ಟೆಸ್ಟಿನಲ್ಲಿ 84 ರನ್ ಹೊಡೆದು ತಂಡವನ್ನು ರಕ್ಷಿಸಿದ್ದಾರೆ. ಹಾಗೆ ನೋಡಿದ್ರೆ ಆರಂಭಿಕ ಆಟಗಾರನಾಗಿ ಬಂದು, ಗೋಡೆಯಂತೆ ನಿಂತು ಆಡುತ್ತಿದ್ದಾರೆ.
ಯಾವ ಬಾಲುಗಳಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯಂತಹ ಅನುಭವಿಗಳು ತಡಕಾಡುತ್ತಿದ್ದಾರೋ, ವಿಕೆಟ್ ಒಪ್ಪಿಸ್ತಿದ್ದಾರೋ.. ಅದೇ ಬಾಲುಗಳನ್ನ ಸಮರ್ಥವಾಗಿ ಎದುರಿಸಿ ಸ್ಕೋರ್ ಮಾಡ್ತಿದ್ದಾರೆ. ತಂಡಕ್ಕೆ ಬೇಡ ಎನಿಸಿಕೊಂಡಿದ್ದ ಆಟಗಾರ, ಈಗ ತಂಡದ ಆಪ್ತರಕ್ಷಕನಾಗಿದ್ದಾರೆ.
ಆಟಗಾರರು ಒಂದೆರಡು ಮ್ಯಾಚ್ ಫೇಲ್ ಆದ್ರೆ, ಅವರು ರಿಟೈರ್ ಆಗ್ಬೇಕು ಅನ್ನೋ ಕೂಗು ಕೇಳಿ ಬರುತ್ತೆ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್ಟಿನಲ್ಲಿ ಆಟಗಾರರ ಫಾರ್ಮ್ ಅನ್ನೋದು ಏರಿಳಿತ ಕಾಣೋದು ಸಾಮಾನ್ಯ. ಕೊಹ್ಲಿ ಆಗಲಿ, ರೋಹಿತ್ ಶರ್ಮಾ ಆಗಲೀ, ಇಂತಹ ಕಳಪೆ ಫಾರ್ಮ್ ಗೆದ್ದು ಬಂದಿರೋವ್ರೇ. ಈ ಅಗ್ನಿ ಪರೀಕ್ಷೆಯಲ್ಲೂ ಗೆದ್ದು ಬರಲಿ ಅನ್ನೋ ಹಾರೈಕೆ ಟೀಂ ಇಂಡಿಯಾ ಅಭಿಮಾನಿಗಳದ್ದು.