ಮುಂಬರುವ ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಕ್ರೀಡಾಪಟುಗಳ ಪಟ್ಟಿಯನ್ನು ಬುಧವಾರ ಭಾರತ ಒಲಿಂಪಿಕ್ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ. ಜು.26 ರಿಂದ ಫ್ರಾನ್ಸ್ ರಾಜಾಧಾನಿ ಪ್ಯಾರಿಸ್ನಲ್ಲಿ ಆರಂಭಗೊಳ್ಳಲಿರುವ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ, ಪಿ.ವಿ.ಸಿಂಧು, ಕರ್ನಾಟಕದ ರೋಹನ್ ಬೋಪಣ್ಣ ಸೇರಿದಂತೆ ಭಾರತದ ಒಟ್ಟು 117 ಅಫೀಟ್ಗಳು ಪಾಲ್ಗೊಳ್ಳುವುದಾಗಿ ಐಒಎ ಮಾಹಿತಿ ನೀಡಿದೆ. ಇದರಲ್ಲಿ 70 ಪುರುಷರು, 47 ಮಹಿಳೆಯರಿದ್ದಾರೆ. ಭಾರತ ಈ ಬಾರಿ ಒಲಿಂಪಿಕ್ಸ್ನ ಒಟ್ಟು 16 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ. ಈ ಪೈಕಿ ಅಥ್ಲೆಟಿಕ್ಸ್ನಲ್ಲಿ ಗರಿಷ್ಠ ಅಂದರೆ 29 ಮಂದಿ (18 ಪುರುಷ, 11 ಮಹಿಳೆಯರು) ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಶೂಟಿಂಗ್ನಲ್ಲಿ ಸಾರ್ವಕಾಲಿಕ ಗರಿಷ್ಠ 21 ಮಂದಿ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲಿದ್ದು, ಟೇಬಲ್ ಟೆನಿಸ್ ತಂಡದಲ್ಲಿ 8, ಬ್ಯಾಡ್ಮಿಂಟನ್ನಲ್ಲಿ 7 ಮಂದಿ ಕಣದಲ್ಲಿದ್ದಾರೆ. ವೇಟ್ಲಿಫ್ಟಿಂಗ್, ಈಕ್ವೆಸ್ಟಿಯನ್ ಹಾಗೂ ಜುಡೋ ರೋಯಿಂಗ್ ಸ್ಪರ್ಧೆಯಲ್ಲಿ ತಲಾ ಒಬ್ಬರು ಸ್ಪರ್ಧಿಸಲಿದ್ದಾರೆ. ಈ ಬಾರಿ ಒಲಿಂಪಿಕ್ಸ್ನಲ್ಲಿ ಕರ್ನಾಟಕದ 8 ಮಂದಿ ಸ್ಪರ್ಧಿಸಲಿದ್ದಾರೆ. ಅಥ್ಲೆಟಿಕ್ಸ್ನಲ್ಲಿ ಎಂ.ಆರ್.ಪೂವಮ್ಮ, ಮಿಜೊ ಕುರಿಯನ್, ಬ್ಯಾಡ್ಮಿಂಟನ್ನಲ್ಲಿ ಅಶ್ವಿನಿ ಪೊನ್ನಪ್ಪ, ಗಾಲ್ಸ್ನಲ್ಲಿ ಅದಿತಿ ಅಶೋಕ್, ಈಜು ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್, ಧಿನಿಧಿ ದೇಸಿಂಘು, ಟೇಬಲ್ ಟೆನಿಸ್ನಲ್ಲಿ ಅರ್ಚನಾ ಕಾಮತ್, ಟೆನಿಸ್ನಲ್ಲಿ ರೋಹನ್ ಬೋಪಣ್ಣ ಸ್ಪರ್ಧಿಸಲಿದ್ದಾರೆ.