ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆತಿಥ್ಯವಹಿಸಿದ್ದ ಪ್ಯಾರಿಸ್ನಲ್ಲಿ ಇಂದಿನಿಂದ 17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್ ಶುರುವಾಗಲಿದೆ. ಇಂದಿನಿಂದ ಆರಂಭವಾಗಲಿರುವ ವಿಕಲಚೇತನರ ಈ ಕ್ರೀಡಾಕೂಟವು ಸೆಪ್ಟೆಂಬರ್ 8 ರವರೆಗೆ ನಡೆಯಲಿದೆ. ಈ ಬಾರಿಯ ಕ್ರೀಡಾಕೂಟದಲ್ಲಿ 184 ದೇಶಗಳ 4400 ಕ್ಕೂ ಹೆಚ್ಚಿನ ಕ್ರೀಡಾಳುಗಳು ಭಾಗವಹಿಸಲಿದ್ದಾರೆ. ಇವರಲ್ಲಿ ಭಾರತದ 84 ಕ್ರೀಡಾಪಟುಗಳಿರುವುದು ವಿಶೇಷ.
2020 ರಲ್ಲಿ ನಡೆದ ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ 54 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ವೇಳೆ 5 ಚಿನ್ನದ ಪದಕ, 8 ಬೆಳ್ಳಿ ಪದಕ ಮತ್ತು 6 ಕಂಚಿನ ಪದಕ ಗೆಲ್ಲುವಲ್ಲಿ ಭಾರತೀಯರು ಯಶಸ್ವಿಯಾಗಿದ್ದರು. ಈ ಬಾರಿ 84 ಕ್ರೀಡಾಪಟುಗಳು ಭಾಗವಹಿಸುತ್ತಿರುವುದರಿಂದ ಭಾರತವು ಹೆಚ್ಚಿನ ಪದಕಗಳ ನಿರೀಕ್ಷೆಯಲ್ಲಿದೆ.
84 ಭಾರತೀಯ ಸ್ಪರ್ಧಿಗಳು ಈ ಬಾರಿ 12 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಇದರಲ್ಲಿ 38 ಸ್ಪರ್ಧಿಗಳು ಅಥ್ಲೆಟಿಕ್ಸ್ನಲ್ಲಿ ಕಣಕ್ಕಿಳಿಯಲಿರುವುದು ವಿಶೇಷ. ಇದಲ್ಲದೆ, ಆರ್ಚರಿ, ಈಜು, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಸೈಕ್ಲಿಂಗ್, ಪವರ್ಲಿಫ್ಟಿಂಗ್, ರೋಯಿಂಗ್, ಶೂಟಿಂಗ್, ಜುಡೋ, ಪ್ಯಾರಾಕೆನೋಯಿಂಗ್, ಟೆಕ್ವಾಂಡೋ ಕ್ರೀಡೆಗಳಲ್ಲಿ ಭಾರತೀಯರು ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ. ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟವು ಆಗಸ್ಟ್ 28 ರ ಬುಧವಾರ ರಾತ್ರಿ 11:30 ಗೆ ಶುರುವಾಗಲಿದೆ.