ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಜಾವೇಲಿನ್ ಎಸೆತದಲ್ಲಿ ಪದಕ ಗೆದ್ದ ಭಾರತದ ಆಟಗಾರ ನೀರಜ್ ಚೋಪ್ರಾ ಅವರನ್ನು ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿ ಗಣ್ಯರು ಅಭಿನಂದಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನೀರಜ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಪಾಕಿಸ್ತಾನದ ಅರ್ಷದ್ ನದೀಮ್ ಅವರು ಒಲಿಂಪಿಕ್ ದಾಖಲೆಯ 92.97 ಮೀಟರ್ ದೂರ ಎಸೆದು ಚಿನ್ನ ಗೆದ್ದರು. ನೀರಜ್ ತಮ್ಮ ಋತುವಿನ ಅತ್ಯುತ್ತಮ 89.45 ಮೀಟರ್ ದೂರ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ನೀರಜ್ ಅವರ ಆರು ಪ್ರಯತ್ನಗಳಲ್ಲಿ ಐದು ಫೌಲ್ ಆಗಿದ್ದವು. ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿಪದಕ ಒಲಿದಂತಾಗಿದೆ.
ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಬರೆದುಕೊಂಡ ಪ್ರಧಾನಿ ಮೋದಿ ಅವರು, ನೀರಜ್ ಚೋಪ್ರಾ ಶ್ರೇಷ್ಠತೆಗೆ ಜೀವಂತ ಉದಾಹರಣೆ. ಅವರು ತಮ್ಮ ಪ್ರತಿಭೆಯನ್ನು ಮತ್ತೆ ಮತ್ತೆ ತೋರಿಸಿದ್ದಾರೆ. ಅವರು ಮತ್ತೊಮ್ಮೆ ಒಲಿಂಪಿಕ್ಸ್ನಲ್ಲಿ ಯಶಸ್ವಿಯಾಗಿರುವುದು ಭಾರತಕ್ಕೆ ಸಂತಸ ತಂದಿದೆ. ಬೆಳ್ಳಿ ಪದಕ ಗೆದ್ದಿರುವ ಅವರಿಗೆ ಅಭಿನಂದನೆಗಳು. ಅವರು ತಮ್ಮ ಕನಸುಗಳನ್ನು ನನಸಾಗಿಸಲು ಮತ್ತು ನಮ್ಮ ದೇಶವನ್ನು ಹೆಮ್ಮೆ ಪಡುವಂತೆ ಮಾಡಲು ಮುಂಬರುವ ಅಸಂಖ್ಯಾತ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇನ್ನು, ಜಾವೆಲಿನ್ ಎಸೆತದ ಫೈನಲ್ನಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ ಅವರನ್ನು ಕಾಂಗ್ರೆಸ್ ಸಂಸದ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ಅಭಿನಂದಿಸಿದ್ದಾರೆ. 2024 ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ ಅವರನ್ನು ಅಭಿನಂದಿಸಿದ ರಾಹುಲ್ ಗಾಂಧಿ ಅವರು, ‘ನೀರಜ್, ನೀವು ಅದ್ಭುತ ಕ್ರೀಡಾಪಟು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನಿಮ್ಮ ಅದ್ಭುತ ಪ್ರದರ್ಶನದ ನಂತರ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ ಅಭಿನಂದನೆಗಳು. ನೀವು ಮತ್ತೊಮ್ಮೆ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ’ ಎಂದು ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಭಾರತೀಯ ಜಾವೆಲಿನ್ ಎಸೆತಗಾರ ನೀರಜ್ರನ್ನು ಅಭಿನಂದಿಸಿದ್ದಾರೆ. ಅವರ ಸಾಧನೆಯು ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿರುವ ರಾಷ್ಟ್ರಪತಿ, ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ ಅವರಿಗೆ ಮತ್ತು ಇತಿಹಾಸ ಬರೆದಿದ್ದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು. ಸತತ ಎರಡು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಆಗಿದ್ದಾರೆ. ಅವರ ಬಗ್ಗೆ ಭಾರತ ಹೆಮ್ಮೆಪಡುತ್ತದೆ ಎಂದು ಹೇಳಿದ್ದಾರೆ.