ರಾಹುಲ್ ದ್ರಾವಿಡ್ ಒಬ್ಬ ಆಟಗಾರನಾಗಿ ಸಾಕಷ್ಟು ರನ್ ಗಳಿಸಿ ಭಾರತ ತಂಡವನ್ನು ಪ್ರತಿ ಬಾರಿಯೂ ದೊಡ್ಡ ಎತ್ತರಕ್ಕೆ ಕೊಂಡೊಯ್ದರು. ಹಾಗೆಯೇ ಇತ್ತೀಚೆಗೆ ವೆಸ್ಟ್ ಇಂಡೀಸ್ನಲ್ಲಿ ನಡೆದ ಟಿ-20 ವಿಶ್ವಕಪ್ ನಲ್ಲಿ ಗೆದ್ದು ಭಾರತ ತಂಡ ಚಾಂಪಿಯನ್ ಆಗುವವರೆಗಿನ ದ್ರಾವಿಡ್ ಮುಖ್ಯ ಕೋಚ್ ಆಗಿ ಅವರ ಕೊಡುಗೆ ಗಮನದಲ್ಲಿಟ್ಟು ಭಾರತ ಸರ್ಕಾರ ಅವರಿಗೆ ಭಾರತ ರತ್ನ ನೀಡಬೇಕು ಎಂದು ಮಾಜಿ ಕ್ರಿಕೆಟಿಗ, ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಒತ್ತಾಯಿಸಿದ್ದಾರೆ.
ಕನ್ನಡಿಗ ರಾಹುಲ್ ದ್ರಾವಿಡ್ 2021 ರಲ್ಲಿ ಭಾರತ ರಾಷ್ಟ್ರೀಯ ತಂಡಕ್ಕೆ ಮುಖ್ಯ ಕೋಚ್ ಆಗಿ ಬಂದರು. ಅಂದಿನಿಂದ, ಭಾರತವು 2022ರ ಟಿ-20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಮತ್ತು 2023 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಏಕದಿನ ವಿಶ್ವಕಪ್ ಫೈನಲ್ನಲ್ಲಿ ಸೋತಿತು. ಕೊನೆಯದಾಗಿ ಅವರ ಕೋಚಿಂಗ್ ಅವಧಿಯಲ್ಲಿ, ಮೆನ್ ಇನ್ ಬ್ಲೂ 2024 ರಲ್ಲಿ ಟಿ-20 ವಿಶ್ವಕಪ್ ಅನ್ನು ಎತ್ತಿಹಿಡಿದಿದ್ದರಿಂದ ರಾಹುಲ್ ಖುಷಿಯಿಂದ ನಿರ್ಗಮಿಸಿದರು.
ಭಾರತ ರತ್ನ ಪ್ರಶಸ್ತಿ ಪಡೆದ ಏಕೈಕ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್. ದ್ರಾವಿಡ್ ಅವರ ಸಾಧನೆಗಳು ಎಲ್ಲಾ ಪಕ್ಷಗಳು, ಜಾತಿ, ಮತ ಮತ್ತು ಸಮುದಾಯಗಳನ್ನು ಮೀರಿವೆ. ಇಡೀ ದೇಶಕ್ಕೆ ಹೇಳಲಾಗದ ಸಂತೋಷವನ್ನು ಕೊಟ್ಟಿದ್ದಾರೆ. ಅದಕ್ಕಾಗಿಯೇ ಅವರನ್ನು ಪರಿಗಣಿಸಬೇಕು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.