ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತೆ ಕ್ರೀಡಾ ಸಾರ್ಥಕತೆ ಮೆರೆದಿದ್ದಾರೆ. 2024ರ ಟಿ20 ವಿಶ್ವಕಪ್ ಟೂರ್ನಿ ಗೆದ್ದ ಹಿನ್ನೆಲೆಯಲ್ಲಿ ಬಿಸಿಸಿಐ ನೀಡಿದ ಬಹುಮಾನ ಮೊತ್ತದಲ್ಲಿ 2.5 ಕೋಟಿ ರೂ. ಹಿಂದಿರುಗಿಸಿ, ಮಾದರಿಯಾಗಿದ್ದಾರೆ. ಸಹಾಯ ಕೋಚ್ ಸಿಬ್ಬಂದಿಯಂತೆ ತಾವೂ 2.5 ಕೋಟಿ ರೂ.ಗಳನ್ನು ಮಾತ್ರ ಪಡೆಯಲಿದ್ದು, ಉಳಿದ ಹಣವನ್ನು ಹಿಂತಿರುಗಿಸಿ ಸಮಾನತೆ ಸಾರಿದ್ದಾರೆ. ಕನ್ನಡಿಗ ರಾಹುಲ್ ದ್ರಾವಿಡ್ ಅವರ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಟಿ20 ವಿಶ್ವಕಪ್ ಕಪ್ ಗೆದ್ದಬೆನ್ನಲೇ ಬಿಸಿಸಿಐ ಘೋಷಿಸಿದ್ದ 125 ಕೋಟಿ ರೂ. ನಗದು ಬಹುಮಾನದಲ್ಲಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಕುಮಾರ್ ಹಾಗೂ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಸೇರಿದಂತೆ ಕೋಚಿಂಗ್ ಸಿಂಬ್ಬಂದಿಗೆ ತಲಾ 2.5 ಕೋಟಿ ರೂ. ಬಹುಮಾನ ಸಿಗಲಿದೆ. ಆದ್ರೆ ಮುಖ್ಯಕೋಚ್ ರಾಹುಲ್ ದ್ರಾವಿಡ್ ಅವರಿಗೆ 5 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಆದ್ರೆ ರಾಹುಲ್ ದ್ರಾವಿಡ್ 2.5 ಕೋಟಿ ರೂ. ಹೆಚ್ಚುವರಿ ಹಣವನ್ನು ಹಿಂದಿರುಗಿಸಿ, ಎಲ್ಲ ಕೋಚಿಂಗ್ ಸಿಬ್ಬಂದಿ ಪಡೆದಷ್ಟೇ ಹಣವನ್ನು ಪಡೆದುಕೊಂಡಿದ್ದಾರೆ, ಹೀಗಾಗಿ ಅವರ ಭಾವನೆಯನ್ನು ಬಿಸಿಸಿಐ ಗೌರವಿಸುವುದಾಗಿ ಮೂಲಗಳು ತಿಳಿಸಿವೆ.
ಬಿಸಿಸಿಐ ಘೋಷಿಸಿದ್ದ 125 ಕೋಟಿ ರೂ. ನಗದು ಬಹುಮಾನ ಮೊತ್ತದಲ್ಲಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾದ 15 ಆಟಗಾರರು ತಲಾ 5 ಕೋಟಿ ರೂ. ಬಹುಮಾನ ಸ್ವೀಕರಿಸಲಿದ್ದಾರೆ. ಈ ಪೈಕಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸಹ ಸೇರಿದ್ದಾರೆ. ಅಲ್ಲದೇ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದ ರಿಂಕು ಸಿಂಗ್, ಶುಭಮನ್ ಗಿಲ್, ಅವೇಶ್ ಖಾನ್ ಹಾಗೂ ಖಲೀಲ್ ಅಹ್ಮದ್ ಅವರಿಗೂ ತಲಾ 1 ಕೋಟಿ ರೂ. ಬಹುಮಾನ ಸಿಗಲಿದೆ.
ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಕುಮಾರ್ ಹಾಗೂ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಸೇರಿದಂತೆ ಕೋಚಿಂಗ್ ಸಿಂಬ್ಬಂದಿಗೆ ತಲಾ 2.5 ಕೋಟಿ ರೂ. ಬಹುಮಾನ ಸಿಗಲಿದೆ. ಇನ್ನೂ ಮುಖ್ಯಸ್ಥ ಅಜಿತ್ ಅಗರ್ಕರ್ ಸೇರಿದಂತೆ ಆಯ್ಕೆ ಸಮಿತಿಯ ಸದಸ್ಯರಿಗೆ ತಲಾ 1 ಕೋಟಿ ರೂ. ವಿತರಿಸಲಾಗುತ್ತದೆ. ಟೀಂ ಇಂಡಿಯಾ ಫಿಸಿಯೋಥೆರಪಿಸ್ಟ್ಗಳಾದ ಕಮಲೇಶ್ ಜೈನ್, ಯೋಗೇಶ್ ಪರ್ಮಾರ್ ಮತ್ತು ತುಳಸಿ ರಾಮ್ ಯುವರಾಜ್ಗೆ ತಲಾ 2 ಕೋಟಿ ರೂ., ಭಾರತ ತಂಡ ಥ್ರೋಡೌನ್ ಸ್ಪೆಷಲಿಸ್ಟ್ಗಳಾದ ರಾಘವಿಂದ್ರ ದಿವಿಗಿ, ನುವಾನ್ ಉದೆನೆಕೆ ಮತ್ತು ದಯಾನಂದ್ ಗರಾನಿಗೆ ತಲಾ 2 ಕೋಟಿ ರೂ., ಟೀಂ ಇಂಡಿಯಾ ಮಸಾಜ್ ಥೆರಪಿಸ್ಟ್ಗಳಾದ ರಾಜೀವ್ ಕುಮಾರ್ ಮತ್ತು ಅರುಣ್ ಕಾನಡೆಗೆ ತಲಾ 2 ಕೋಟಿ ರೂ., ಭಾರತ ತಂಡದ ಸ್ಟ್ರೆಂಗ್ತ್ ಅ್ಯಂಡ್ ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿಗೆ 2 ಕೋಟಿ ರೂ. ನೀಡಲಾಗುತ್ತದೆ ಎಂದು ವರದಿಗಳು ಹೇಳಿವೆ.