ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೂ ಮೊದಲು, ನಾಯಕ ರೋಹಿತ್ ಶರ್ಮಾ ಅವರ ಆಗಮನದಿಂದ ಕೆ.ಎಲ್. ರಾಹುಲ್ ಅವರ ಬ್ಯಾಟಿಂಗ್ ಸ್ಥಾನವನ್ನು ಕುರಿತು ಚರ್ಚೆಗಳು ನಡೆಯುತ್ತಿವೆ. ರೋಹಿತ್ ಅವರ ಆರಂಭಿಕ ಸ್ಥಾನವನ್ನು ರಾಹುಲ್ಗಾಗಿ ತ್ಯಾಗ ಮಾಡುತ್ತಾರೆ ಎಂಬ ವರದಿಗಳ ನಡುವೆಯೇ, ಈ ವಿಷಯದ ಕುರಿತು ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. “ನನಗೆ ಯಾವ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕೆಂದು ತಿಳಿಸಲಾಗಿದೆ, ಆದರೆ ಈ ವಿಚಾರವನ್ನು ಹಂಚಿಕೊಳ್ಳಬೇಡಿ ಎಂದೂ ಸೂಚಿಸಲಾಗಿದೆ. ನೀವು ಟೆಸ್ಟ್ನ ಮೊದಲ ದಿನಕ್ಕೆ ಅಥವಾ ನಾಳೆ ನಾಯಕನ ಉತ್ತರಕ್ಕಾಗಿ ಕಾಯಬಹುದು,” ಎಂದು ಅವರು ಸ್ಪಷ್ಟನೆ ನೀಡಿದರು.
ಪರ್ತ್ನ ಆಪ್ಟಸ್ ಸ್ಟೇಡಿಯಂ ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ರಾಹುಲ್ ಯಶಸ್ವಿ ಜೈಸ್ವಾಲ್ ಜೊತೆಗೆ ಓಪನರ್ ಆಗಿ ಕಣಕ್ಕಿಳಿದು, 74 ಎಸೆತಗಳಲ್ಲಿ 26 ರನ್ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 77 ರನ್ ಗಳಿಸಿದರು. ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಭಾರತ 295 ರನ್ಗಳ ಅಂತರದಿಂದ ಜಯ ಸಾಧಿಸಿತು. ಇತ್ತ, ರೋಹಿತ್ ಶರ್ಮಾ ತಮ್ಮ ಎರಡನೇ ಮಗುವಿನ ಜನನದ ಹಿನ್ನೆಲೆಯಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಮಿಸ್ ಮಾಡಿದ್ದರಿಂದ, ರಾಹುಲ್ ಅವರಿಗೆ ಈ ಅವಕಾಶ ದೊರಕಿತ್ತು. ರಾಹುಲ್ ತಮ್ಮ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದರು.
ಪಿಂಕ್ ಬಾಲ್ ಟೆಸ್ಟ್ಗೆ ಮೊದಲ ಬಾರಿಗೆ ತಯಾರಾಗುತ್ತಿರುವ ರಾಹುಲ್, ತಮ್ಮ ಸಿದ್ಧತೆ ಕುರಿತು ಮಾತನಾಡಿ “ನ್ಯೂಜಿಲೆಂಡ್ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ನಾನು ಆಡಲಿಲ್ಲ. ಆದರೆ, ನನಗೆ ಸಿದ್ಧತೆಗಾಗಿ ಸಾಕಷ್ಟು ಸಮಯ ನೀಡಲಾಗಿತ್ತು. ನಾನು ಓಪನರ್ ಆಗಿ ಬ್ಯಾಟಿಂಗ್ ಮಾಡಲು ಸಂಪೂರ್ಣ ಸಜ್ಜಾಗಿದ್ದೇನೆ. ಇದು ನಾನು ವೃತ್ತಿಜೀವನದಲ್ಲಿ ಬಹಳ ಸಮಯದಿಂದ ಮಾಡುತ್ತಿರುವ ಕಾರ್ಯ. ರನ್ ಗಳಿಸುವ ಕ್ರಮ ಮತ್ತು ಶೈಲಿಯಲ್ಲಿ ನನ್ನ ಮೇಲೆ ವಿಶ್ವಾಸವಿದೆ. ನಾನು ನನ್ನ ಶಕ್ತಿಗಳನ್ನು ಮತ್ತಷ್ಟು ತೀಕ್ಷ್ಣಗೊಳಿಸಲು ಹೆಚ್ಚಿನ ಅಭ್ಯಾಸ ಮಾಡಿದ್ದೇನೆ,” ಎಂದು ಅವರು ಹೇಳಿದ್ದಾರೆ.
ಅನೇಕ ತಜ್ಞರು ಮತ್ತು ಮಾಜಿ ಆಟಗಾರರು ತಂಡದ ಸಮೀಕ್ಷೆಯನ್ನು ಬದಲಾಯಿಸಬಾರದು, ರಾಹುಲ್ ಮತ್ತು ಜೈಸ್ವಾಲ್ ಅವರನ್ನು ಓಪನರ್ಗಳಾಗಿ ಮುಂದುವರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.