ಲಂಡನ್: ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಹಾಗೂ ರನ್ನರ್ ಅಪ್ ನೊವಾಕ್ ಜೋಕೊವಿಕ್ ವಿಂಬಲ್ಡನ್ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿಗಾಗಿ ಭಾನುವಾರ ಕಾದಾಟ ನಡೆಸಲಿದ್ದಾರೆ. ವಿಶ್ವ ನಂ. 2 ಜೊಕೊವಿಕ್ ಒಟ್ಟಾರೆ 10ನೇ ಬಾರಿ ಹಾಗೂ ಸತತ 6ನೇ ಬಾರಿಗೆ ವಿಂಬಲ್ಡನ್ ಫೈನಲ್ ಆಡಲಿದ್ದು, ಇದು ಕಳೆದ ವರ್ಷದ ಫೈನಲ್ನ ಮರು ಮುಖಾಮುಖಿ ಎನಿಸಿದೆ. ಜೋಕೋ ಅವರನ್ನು ಮಣಿಸಿ ಅಲ್ಕರಾಜ್ ಮೊದಲ ಬಾರಿ ವಿಂಬಲ್ಡನ್ ಟ್ರೋಫಿಗೆ ಮುತ್ತಿಕ್ಕಿದ್ದರು. ಜೋಕೊವಿಕ್ 2014 ಹಾಗೂ 2015ರಲ್ಲಿ ರೋಜರ್ ಫೆಡರರ್ ಅವರನ್ನು ಸೋಲಿಸಿದ ಬಳಿಕ ಅದೇ ಇಬ್ಬರು ಆಟಗಾರರು (ಅಲ್ಕರಾಜ್-ಜೋಕೊವಿಕ್) ಸತತವಾಗಿ ವಿಂಬಲ್ಡನ್ ಫೈನಲ್ ಆಡಲಿರುವ ಮೊದಲ ದೃಷ್ಟಾಂತ ಇದಾಗಿದೆ.
ಹಾಲಿ ಋತುವಿನಲ್ಲಿ ಇದಕ್ಕೆ ಮುನ್ನ ಯಾವುದೇ ಟೂರ್ನಿಯಲ್ಲಿ ಫೈನಲ್ಗೇರಿರದ 24 ಗ್ರಾಂಡ್ ಸ್ಲಾಂ ಒಡೆಯ ಜೋಕೋ ಬಲಗಾಲಿನ ಮಂಡಿ ಶಸ್ತ್ರ ಚಿಕಿತ್ಸೆಯ ಬಳಿಕ ಆಲ್ ಇಂಗ್ಲೆಂಡ್ ಕ್ಲಬ್ನಲ್ಲಿ ತನ್ನ ಎಂಟನೇ ಟ್ರೋಫಿ ಜಯಿಸುವ ತವಕದಲ್ಲಿದ್ದಾರೆ. ಅಲ್ಕರಾಜ್ ಎದುರು ಜೋಕೋ ಗೆದ್ದರೆ, ಹಸಿರು ಅಂಕಣದಲ್ಲಿ ಗರಿಷ್ಠ ಬಾರಿ ಪ್ರಶಸ್ತಿ ಜಯಿಸಿದ ಫೆಡರರ್ (8) ದಾಖಲೆ ಸರಿಗಟ್ಟಲಿದ್ದಾರೆ. ಜತೆಗೆ ಟೆನ್ನಿಸ್ ಇತಿಹಾಸದಲ್ಲಿ ವೃತ್ತಿಜೀವನದ 25ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎನಿಸಲಿದ್ದಾರೆ. ಸೆರ್ಬಿಯಾದ 37 ವರ್ಷದ ಜೋಕೋಗೆ ಇದು 37ನೇ ಗ್ರಾಂಡ್ ಸ್ಲಾಂ ಫೈನಲ್ ಪಂದ್ಯವಾಗಿದೆ.
ಮೂರನೇ ಶ್ರೇಯಾಂಕಿತ 21 ವರ್ಷದ ಅಲ್ಕರಾಜ್ ಈಗಾಗಲೇ 3 ಗ್ರಾಂಡ್ ಸ್ಲಾಂ ಟ್ರೋಫಿ ಗೆದ್ದ ಅತ್ಯಂತ ಕಿರಿಯ ಆಟಗಾರ ಎನಿಸಿದ್ದು, ಮುಕ್ತ ಟೆನಿಸ್ ಯುಗದಲ್ಲಿ 22ನೇ ವರ್ಷಕ್ಕೂ ಮುನ್ನ 2 ಬಾರಿ ವಿಂಬಲ್ಡನ್ ಗೆದ್ದ ಮೂರನೇ ಆಟಗಾರ ಎನಿಸುವ ಅವಕಾಶವಿದೆ. ಬೋರಿಸ್ ಬೆಕರ್ ಮತ್ತು ಬೊರ್ನ್ ಬೋರ್ಗ್ ಹಿಂದಿನ ಸಾಧಕರು. ಅಲ್ಕರಾಜ್ ಇದುವರೆಗೆ ಗ್ರಾಂಡ್ ಸ್ಲಾಂ ಫೈನಲ್ನಲ್ಲಿ ಅಜೇಯ ದಾಖಲೆ ಹೊಂದಿದ್ದಾರೆ.