ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಹಾಗೂ ಹಿಂಸಾಚಾರ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ಸುರಕ್ಷತೆ ದೃಷ್ಟಿಯಿಂದ ಮುಂಬರುವ ಮಹಿಳಾ ವಿಶ್ವಕಪ್ ಟೂರ್ನಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ, ಬಾಂಗ್ಲಾದಿಂದ ಯುಎಇಗೆ ಸ್ಥಳಾಂತರಿಸಿದೆ. ಅಕ್ಟೋಬರ್ 3ರಿಂದ 20ರವರೆಗೂ ನಿಗದಿಯಾಗಿರುವ ವಿಶ್ವಕಪ್ ಪಂದ್ಯಗಳು ದುಬೈ ಹಾಗೂ ಶಾರ್ಜಾದಲ್ಲಿ ನಡೆಯಲಿವೆ ಎಂದು ಐಸಿಸಿ ಮಂಗಳವಾರ ತಿಳಿಸಿದೆ.
ಬಾಂಗ್ಲಾದಲ್ಲಿ ಹಿಂಸಾಚಾರ ಆರಂಭಗೊಂಡ ದಿನವೇ ಐಸಿಸಿ ಅಲ್ಲಿನ ಭದ್ರತಾ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿತ್ತು. ಬಾಂಗ್ಲಾ ಕ್ರಿಕೆಟ್ ಸಂಸ್ಥೆ ಕೂಡ ವಿಶ್ವಕಪ್ ಆಯೋಜನೆಗೆ ಯಾವುದೇ ಸಮಸ್ಯೆಯಾಗದಂತೆ ರಕ್ಷಣೆ ಒದಗಿಸುವುದಾಗಿ ಗ್ಯಾರಂಟಿ ನೀಡುವಂತೆ ಬಾಂಗ್ಲಾ ಸೇನೆಯನ್ನು ಕೇಳಿತ್ತು. ಆದರೆ ಸರಿಯಾದ ಪ್ರತಿಕ್ರಿಯೆ ದೊರಕದ ಕಾರಣ, ಐಸಿಸಿ ಬಳಿ ತನ್ನ ಅಸಹಾಯಕತೆ ವ್ಯಕ್ತಪಡಿಸಿತ್ತು. ಬಳಿಕ ಟೂರ್ನಿ ಆಯೋಜಿಸುವಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬಳಿ ಐಸಿಸಿ ಮನವಿ ಮಾಡಿತ್ತು. ಆದರೆ ಐಸಿಸಿ ಕೋರಿಕೆಯನ್ನು ಜಯ್ ಶಾ ತಿರಸ್ಕರಿಸಿದ್ದರು. ಹೀಗಾಗಿ, ಟಿ20 ವಿಶ್ವಕಪ್ ಟೂರ್ನಿಯನ್ನು ಯುಎಇ ಸ್ಥಳಾಂತರಿಸದೆ ಐಸಿಸಿಗೆ ಬೇರೆ ದಾರಿಯೇ ಇರಲಿಲ್ಲ.