ಸಿಎಂ ಸಿದ್ದರಾಮಯ್ಯ ಪಾಲಿಗೆ ಸಂಕಷ್ಟದ ದಿನಗಳು ಆರಂಭವಾಗಿವೆ. ತನಿಖೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಇದರ ಬೆನ್ನಲ್ಲೇ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ. ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿಂದು ವಿಚಾರಣೆ ನಡೆಯಲಿದ್ದು, ಮುಂದೆ ನಡೆಯುವ ಪ್ರಕ್ರಿಯೆಗಳೇನು. ಸಿಎಂ ಮುಂದಿರುವ ಆಯ್ಕೆಗಳೇನು ಎಂಬುದನ್ನ ನಾವಿಲ್ಲಿ ನೋಡೋಣ…
ಮುಡಾ ನಿವೇಶನ ಹಂಚಿಕೆಯಲ್ಲಿ ನ್ಯಾಯವಲ್ಲದ ಲಾಭ ಪಡೆದ ಆರೋಪ ಹೊತ್ತಿರುವ ಸಿಎಂ ಸಿದ್ದರಾಮಯ್ಯಗೆ ಈಗ ಎಫ್ಐಆರ್ ಭೀತಿ ಶುರುವಾಗಿದೆ. ಸಿದ್ದರಾಮಯ್ಯ ವಿರುದ್ಧದ ಆರೋಪಗಳಿಗೆ ತನಿಖೆ ಅಗತ್ಯವೆಂದು ಹೇಳಿರುವ ಹೈಕೋರ್ಟ್, ಸಿಎಂ ಸಿದ್ದರಾಮಯ್ಯ ರಿಟ್ ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ಸ್ನೇಹಮಯಿ ಕೃಷ್ಣ, ಟಿ.ಜೆ.ಅಬ್ರಹಾಂ ಸಲ್ಲಿಸಿದ್ದ ಖಾಸಗಿ ದೂರುಗಳಿಗೆ ಮತ್ತೆ ಜೀವ ಬಂದಿದೆ.
ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿಂದು ಮುಡಾ ಬಗ್ಗೆ ವಿಚಾರಣೆ ನಡೆಯಲಿದೆ. ಮುಡಾ ಹಗರಣದಲ್ಲಿ ಸಿಎಂ ಪಾತ್ರದ ಬಗ್ಗೆ ತನಿಖೆಯ ಅಗತ್ಯವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿರುವುದರಿಂದ, ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಕೂಡಾ ತನಿಖೆಗೆ ಆದೇಶಿಸುವ ಸಾಧ್ಯತೆ ಹೆಚ್ಚಿದೆ.
ಇಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ನಲ್ಲಿ ಎರಡು ಖಾಸಗಿ ದೂರುಗಳ ವಿಚಾರಣೆ ನಡೆಯಲಿದೆ. ಹೈಕೋರ್ಟ್ ಆದೇಶದ ಪ್ರತಿ ಸಲ್ಲಿಸಲಿರುವ ದೂರುದಾರರು ಪ್ರಕರಣವನ್ನ ತನಿಖೆಗೆ ವಹಿಸುವಂತೆ ವಾದಿಸಲಿದ್ದಾರೆ. ತನಿಖೆ ಬಗ್ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್ ತೀರ್ಮಾನಿಸಲಿದ್ದಾರೆ. ಯಾವ ಸಂಸ್ಥೆ ತನಿಖೆ ನಡೆಸಬೇಕೆಂದು ಕೋರ್ಟ್ ನಿರ್ಧರಿಸಲಿದೆ. ಕೋರ್ಟ್ ತನಿಖೆಗೆ ಆದೇಶ ನೀಡಿದರೆ ಸಿಎಂಗೆ ಸಂಕಷ್ಟ ಶುರುವಾಗಲಿದೆ. ಸಿಎಂ ವಿರುದ್ಧ ಎಫ್ಐಆರ್ ದಾಖಲಾಗಲಿದೆ. ಎಫ್ಐಆರ್ ದಾಖಲಾದರೆ ರಾಜೀನಾಮೆ ಒತ್ತಡ ಹೆಚ್ಚಲಿದೆ.
ಎಫ್ಐಆರ್ ಭೀತಿಯಲ್ಲಿರುವ ಸಿಎಂ ಸಿದ್ದರಾಮಯ್ಯ ಸಹ, ಮುಂದಿನ ಕಾನೂನು ಸಮರಕ್ಕೆ ಸಜ್ಜಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಪರ ವಕೀಲರ ತಂಡ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದೆ. ಒಂದು ವೇಳೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ತಡೆಯಾಜ್ಞೆ ಸಿಗದಿದ್ದರೆ, ಸುಪ್ರೀಂಕೋರ್ಟ್ ಮೆಟ್ಟಿಲೇರಲೂ ಸಿದ್ದರಾಮಯ್ಯ ಪರ ವಕೀಲರ ತಂಡ ಸಿದ್ಧತೆ ನಡೆಸಿದೆ. ಎಫ್ಐಆರ್ ದಾಖಲಾದರೂ ಅದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲು ಸಿಎಂ ಸಿದ್ದರಾಗಿದ್ದಾರೆ.