ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸೋರಿಕೆಯಿಂದ ಸಂಭವಿಸಿದ್ದ ಅಗ್ನಿ ಅನಾಹುತದಲ್ಲಿ ಗಾಯಗೊಂಡಿದ್ದ ಅಯ್ಯಪ್ಪ ಮಾಲಾಧಾರಿಗಳ ಪೈಕಿ 58 ವರ್ಷದ ನಿಜಲಿಂಗಪ್ಪ ಬೇಪುರಿ ಹಾಗೂ 20 ವರ್ಷದ ಸಂಜಯ ಸವದತ್ತಿ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಹಿನ್ನೆಲೆಯಲ್ಲಿ ಮಾನ್ಯ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಂತೋಷ್ ಲಾಡ್ ರವರು ಕಿಮ್ಸ್ ಅಸ್ಪತ್ರೆಗೆ ತೆರಳಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಗಾಯಗೊಂಡ ಎಲ್ಲರಿಗೂ ಹೆಚ್ಚಿನ ಮುತುವರ್ಜಿ ವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಬೆಂಗಳೂರಿನಿಂದ ತಜ್ಞ ವೈದ್ಯರನ್ನೂ ಸಹ ಕರೆಸಲಾಗಿದೆ. ಇಷ್ಟೆಲ್ಲ ಪ್ರಯತ್ನಗಳ ಮಧ್ಯೆಯೂ ಈ ಸಾವುಗಳು ಸಂಭವಿಸಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ಸಚಿವರು, ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ ₹5 ಲಕ್ಷ ಪರಿಹಾರವನ್ನು ಘೋಷಿಸಿದರು. ಹಾಗೆಯೇ ಮೃತರ ಕುಟುಂಬಕ್ಕೆ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ.
ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀಮತಿ ದಿವ್ಯಪ್ರಭು, ಪೊಲೀಸ್ ಅಧಿಕಾರಿಗಳು, ಕಿಮ್ಸ್ ಆಸ್ಪತ್ರೆಯ ವೈದ್ಯರುಗಳ ತಂಡ ಹಾಗೂ ಗಾಯಾಳುಗಳ ಕುಟುಂಬಸ್ಥರು ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಮೃತಪಟ್ಟ ಕುಟುಂಬಕ್ಕೆ ಮುಖ್ಯಮಂತ್ರಿ ನಿರ್ದೇಶನದ ಮೇಲೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿದೆ. ಇನ್ನುಳಿದವರಿಗೆ ಚಿಕಿತ್ಸೆ ಮುಂದುವರೆದಿದೆ. ಓರ್ವ ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಉಳಿದವರ ಕುಟುಂಬದ ಜೊತೆ ಸಮಾಲೋಚನೆ ಮಾಡಿ ಇನ್ನೂ ಹೆಚ್ಚಿನ ಚಿಕಿತ್ಸೆ ನೀಡುತ್ತೇವೆ ಎಂದು ಸಂತೋಷ್ ಲಾಡ್ ರವರು ಹೇಳಿದ್ದಾರೆ.
ಸದ್ಯ ಕಿಮ್ಸ್ ಶವಾಗಾರದಿಂದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಎರಡು ಅಂಬುಲೆನ್ಸ್ ಮೂಲಕ ಮೃತದೇಹವನ್ನು ಮನೆಗೆ ರವಾನಿಸಲಾಗಿದೆ. ಸಂಜಯ್ ಸವದತ್ತಿ ಅಂತ್ಯಕ್ರಿಯೆ ವಿದ್ಯಾನಗರದ ರುದ್ರಭೂಮಿಯಲ್ಲಿ ನಡೆಯಲಿದ್ದು, ನಿಜಲಿಂಗಪ್ಪ ಅವರ ಅಂತ್ಯಸಂಸ್ಕಾರ ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ನಡೆಯಲಿದೆ.
ಮೃತರನ್ನು ನಿಜಲಿಂಗಪ್ಪ ಬೇಪುರಿ(58) ಮತ್ತು ಸಂಜಯ ಸವದತ್ತಿ (20) ಎಂದು ಗುರುತಿಸಲಾಗಿದೆ. ಈ ಇಬ್ಬರಿಗೂ ಕಳೆದ ಮೂರು ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಇನ್ನುಳಿದ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ.