ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಪಂದ್ಯದ ಬಳಿಕ ಸಾವನ್ನಪ್ಪಿರುವ ದಾರುಣ ಘಟನೆ ನಾಗಮಂಗಲದಲ್ಲಿ ನಡೆದಿದೆ. ನೆನ್ನೆ ಹನುಮ ಜಯಂತಿ ಹಿನ್ನೆಲೆಯಲ್ಲಿ ನಾಗಮಂಗಲ ತಾಲೂಕಿನ ಸುಖಧರೆ ಗ್ರಾಮದಲ್ಲಿ ಕಬಡ್ಡಿ ಪಂದ್ಯಾವಳಿ ಏರ್ಪಡಿಸಲಾಗಿತ್ತು.
ಉಡುಪಿ ಜಿಲ್ಲೆ ಹೆಬ್ರಿಯ ಪ್ರೀತಮ್ ಶೆಟ್ಟಿ ಅವರು ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಆಗಮಿಸಿದ್ದರು. ಪಂದ್ಯ ಮುಗಿದ ನಂತರ ಪ್ರೀತಂ ಶೆಟ್ಟಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಾಗಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರೀತಮ್ ಶೆಟ್ಟಿ ಅವರ ಪಾರ್ಥಿವ ಶರೀರವನ್ನ ಇರಿಸಲಾಗಿದೆ.
ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಪ್ರೀತಮ್ ಶೆಟ್ಟಿಗೆ ಕೇವಲ 24 ವರ್ಷ ವಯಸ್ಸಾಗಿತ್ತು. ಚಿಕ್ಕ ವಯಸ್ಸಿನಲ್ಲೇ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದ ಆಟಗಾರ. ಕಬಡ್ಡಿ ಆಟಗಾರನಾಗಿ ಸಾಕಷ್ಟು ಸಾಧನೆ ಮಾಡುವ ಆಸೆ ಹೊಂದಿದ್ದ ಪ್ರೀತಮ್ ಶೆಟ್ಟಿ ದುರಂತ ಅಂತ್ಯ ಕಂಡಿದ್ದಾರೆ. ಪ್ರೀತಮ್ ಶೆಟ್ಟಿ ಅವರು ಹೃದಯಘಾತವಾಗುವ ಕೆಲ ಕ್ಷಣಗಳ ಮುನ್ನ ಕಬಡ್ಡಿ ಆಡುತ್ತಿರುವ ವಿಡಿಯೋ ಕಣ್ಣಂಚಲ್ಲಿ ನೀರು ಬರಿಸುವಂತಿದೆ.