ರಾಜ್ಯಸಭೆಯಲ್ಲಿ ನೂತನ ಸಂಸದೆ ಸುಧಾಮೂರ್ತಿ ಅವರು ಮಾಡಿರುವ ಭಾಷಣಕ್ಕೆ ಎಲ್ಲೆಡೆ ಮೆಚ್ಚಗೆಯ ಸುರಿಮಳೆಯಾಗುತ್ತಿದೆ. ಕನ್ನಡತಿ ಸುಧಾಮೂರ್ತಿಯವರ ಮಹಿಳಾಪರ ಕಾಳಜಿಯ ಭಾಷಣಕ್ಕೆ ಪ್ರಧಾನಿ ಮೋದಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ʻಮಹಿಳೆಯರ ಆರೋಗ್ಯದ ಬಗ್ಗೆ ವಿವರವಾಗಿ ಮಾತನಾಡಿದ ಸುಧಾ ಮೂರ್ತಿ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ’ ಎಂದಿದ್ದಾರೆ.
ರಾಜ್ಯಸಭೆಯ ತಮ್ಮ ಚೊಚ್ಚಲ ಭಾಷಣದಲ್ಲಿ, ಸುಧಾ ಮೂರ್ತಿಯವರು ಭಾರತದ ಮಹಿಳೆಯರಲ್ಲಿ ಹೆಚ್ಚಾಗುತ್ತಿರುವ ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಲು ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ರೂಪಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮಹಿಳೆಯರ ಆರೋಗ್ಯದ ಬಗ್ಗೆ ಮಾತನಾಡಿದ ಸುಧಾಮೂರ್ತಿ, 9 ರಿಂದ 14 ವರ್ಷದೊಳಗಿನ ಬಾಲಕಿಯರಿಗೆ ಗರ್ಭಕಂಠದ ವ್ಯಾಕ್ಸಿನೇಷನ್ ಇದೆ. ಹುಡುಗಿಯರು ಅದನ್ನು ತೆಗೆದುಕೊಂಡರೆ, ಮುಂದೆ ಬರಬಹುದಾದ ಕ್ಯಾನ್ಸರ್ ತಪ್ಪಿಸಬಹುದು. ನಮ್ಮ ದೇಶದ ಬಾಲಕಿಯರ ಉತ್ತಮ ಆರೋಗ್ಯಕ್ಕಾಗಿ ನಾವುಗರ್ಭಕಂಠದ ಕ್ಯಾನ್ಸರ್ ವಿರುದ್ಧದ ವ್ಯಾಕ್ಸಿನೇಷನ್ ಅನ್ನು ಉತ್ತೇಜಿಸಬೇಕು, ಕ್ಯಾನ್ಸರ್ ತಡೆಗಟ್ಟುವಿಕೆಯು ಚಿಕಿತ್ಸೆಗಿಂತ ಉತ್ತಮವಾಗಿದೆ. ಕೋವಿಡ್ ಸಮಯದಲ್ಲಿ ದೇಶಾದ್ಯಂತ ದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ನಡೆಸಿದ ಸರ್ಕಾರಕ್ಕೆ, 9-14 ವರ್ಷ ವಯಸ್ಸಿನ ಬಾಲಕಿಯರಿಗೆ ಗರ್ಭಕಂಠದ ವ್ಯಾಕ್ಸಿನೇಷನ್ ಜಾರಿಗೆ ತರುವುದು ಕಷ್ಟವಲ್ಲ, ಪಾಶ್ಚಿಮಾತ್ಯ ದೇಶಗಳಲ್ಲಿ ಅಭಿವೃದ್ಧಿಪಡಿಸಲಾದ ಗರ್ಭಕಂಠದ ವ್ಯಾಕ್ಸಿನೇಷನ್ ಅನ್ನು ಕಳೆದ 20 ವರ್ಷಗಳಿಂದ ಬಳಸಲಾಗುತ್ತಿದೆ ಎಂದು ಕನ್ನಡತಿ ಸುಧಾಮೂರ್ತಿ ಮಾತನಾಡಿದ್ದಾರೆ.