ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದಸುಪ್ರೀಂ ಕೋರ್ಟ್ನ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಆರ್.ಎಫ್. ನಾರಿಮನ್ ಬೇಸರ ವ್ಯಕ್ತ ಪಡಿಸಿದ್ದಾರೆ. ಇದು ಜಾತ್ಯತೀತ ತತ್ವಕ್ಕೆ ನ್ಯಾಯ ಒದಗಿಸಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ನ್ಯಾ| ಎ.ಎಂ. . ಅಹ್ಮದಿ ಸ್ಮರಣಾರ್ಥ ನಡೆದ ಉಪನ್ಯಾಸ ಸಮಾರಂಭದಲ್ಲಿ ‘ಜಾತ್ಯತೀತತೆ ಹಾಗೂ ಭಾರತೀಯ ಸಂವಿಧಾನ’ ವಿಷಯದ ಬಗ್ಗೆ ಮಾತನಾಡಿದ ನಾರಿಮನ್, ‘ಅಯೋಧ್ಯೆ ತೀರ್ಪಿನಲ್ಲಿ ಜಾತ್ಯತೀತ ತತ್ವಕ್ಕೆ ತಕ್ಕುದಾದ ಬೆಲೆ ಸಿಗಲಿಲ್ಲ. ಇದು ನ್ಯಾಯಾಂಗದ ಅಣಕ’ ಎಂದರು.
‘ಬಾಬ್ರಿ ಮಸೀದಿ ಧ್ವಂಸವು ಅಕ್ರಮ ಎಂದು ಕೋರ್ಟು ಒಂದೆಡೆ ಹೇಳಿತು. ಆದರೆ ಮಸೀದಿ ಇದ್ದ ಅದೇ ಜಮೀನಿನಲ್ಲಿ ಮಂದಿರ ಕಟ್ಟಲು ಅವಕಾಶ ನೀಡುವಾಗ ಅದು ನೀಡಿದ ಕಾರಣಗಳು ಸರಿ ಇರಲಿಲ್ಲ’ ಎಂದು ಪ್ರಶ್ನಿಸಿದರು. ಆದರೆ ಇದೇ ವೇಳೆ, ‘1947ರ ಆ.15ರಂದು ಅಸ್ತಿತ್ವದಲ್ಲಿದ್ದ ಯಾವುದೇ ಧಾರ್ಮಿಕ ಸ್ಥಳಗಳ ಮೂಲಸ್ವರೂಪನ್ನು ಬದಲಿಸಬಾರದು ಎಂದು ಹೇಳುವ 1991ರ ಪೂಜಾ ಸ್ಥಳ ಕಾಯ್ದೆಯನ್ನು ಕೋರ್ಟು ಎತ್ತಿ ಹಿಡಿದಿದ್ದು ಸ್ವಾಗತಾರ್ಹ. ಇದು ಬೆಳ್ಳಿ ಗೆರೆ ಇದ್ದಂತೆ’ ಎಂದರು.
‘ಆದಾಗ್ಯೂ ಇಂದು ದೇಶದ ಅನೇಕ ಕಡೆ ಇದೇ ರೀತಿ ಮಸೀದಿಗಳು ಹಾಗೂ ದರ್ಗಾಗಳ ವಿರುದ್ಧ ಅರ್ಜಿಗಳು ಸಲ್ಲಿಕೆ ಆಗುತ್ತಿವೆ. ಹೀಗಾಗಿ 1991ರ ಪೂಜಾ ಸ್ಥಳ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಇದರಿಂದ ವಿವಾದಗಳಿಗೆ ಪೂರ್ಣ ವಿರಾಮ ಬೀಳಲಿದೆ’ ಎಂದು ಅವರು ಮನವಿ ಮಾಡಿದರು. 2019ರಲ್ಲಿ ಸರ್ವೋಚ್ಚ ನ್ಯಾಯಾಲಯ ಅಯೋಧ್ಯೆ ರಾಮಜನ್ಮಭೂಮಿ ತೀರ್ಪು ಪ್ರಕಟಿಸಿತ್ತು.
ಡಿ.12ಕ್ಕೆ ಪೂಜಾ ಸ್ಥಳ ಕಾಯ್ದೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ:
1991ರ ಪೂಜಾ ಸ್ಥಳ ಕಾಯ್ದೆಯ ಕೆಲವು ಅಂಶಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಗುಚ್ಛದ ವಿಚಾರಣೆಗೆ ಸುಪ್ರೀಂ ಕೋರ್ಟು ವಿಶೇಷ ಪೀಠ ರಚಿಸಿದ್ದು, ಡಿ.12ರಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ. 1947ರ ಆ.15ರಂದು ಅಸ್ತಿತ್ವದಲ್ಲಿದ್ದ ಯಾವುದೇ ಧಾರ್ಮಿಕ ಸ್ಥಳಗಳ ಮೂಲ ಸ್ವರೂಪನ್ನು ಬದಲಿಸಬಾರದು ಎಂದು 1991ರ ಪೂಜಾ ಸ್ಥಳ ಕಾಯ್ದೆ ಹೇಳುತ್ತದೆ. ಆದರೆ ಈ ಕಾಯ್ದೆಯಿಂದ ಸ್ವರೂಪ ಬದಲಿಸಲು ಕೋರಿ ಅರ್ಜಿಗಳನ್ನು ಸಲ್ಲಿಸಲು ಆಗುತ್ತಿಲ್ಲ. ಇದರಿಂದ ಪೂಜಾ ಸ್ಥಳಗಳ ಮೇಲೆ ಹಕ್ಕು ಸಾಧಿಸಲು ಆಗುತ್ತಿಲ್ಲ ಹಾಗೂ ನ್ಯಾಯ ಕೇಳುವ ಹಕ್ಕಿಗೆ ಧಕ್ಕೆ ಬರುತ್ತಿದೆ. ಹೀಗಾಗಿ ಕಾಯ್ದೆಯಲ್ಲಿ ಬದಲಾವಣೆ ಮಾಡಬೇಕು’ ಎಂದು ವಕೀಲ ಅಶ್ವಿನಿ ಉಪಾಧ್ಯಾಯ ಸೇರಿ ಹಲವರು ಅರ್ಜಿ ಸಲ್ಲಿಸಿದ್ದಾರೆ.ಇದರ ವಿಚಾರಣೆಗೆ ಮುಖ್ಯ ನ್ಯಾ| ಸಂಜೀವ್ ಖನ್ನಾ, ನ್ಯಾ| ಸಂಜಯ ಕುಮಾರ್ ಹಾಗೂನ್ಯಾ|ಕೆ.ವಿ.ವಿಶ್ವನಾಥನ್ ಅವರ ವಿಶೇಷ ಪೀಠ ರಚನೆ ಆಗಿದೆ. ಈಗ ಅಯೋಧ್ಯೆ ನಂತರ ಕಾಶಿ ಗ್ಯಾನವಾಪಿ, ಸಂಭಲ್, ಮಥುರಾ ಮಸೀದಿ ಹಾಗೂ ಅಜೇರ್ ದರ್ಗಾ ವಿವಾದ ನಡೆದಿವೆ.