ದೇಶಾದ್ಯಂತ ಬಿರುಗಾಳಿ ಎಬ್ಬಿಸಿದ್ದ ವೈದ್ಯಕೀಯ ಕೋರ್ಸುಗಳ ಪ್ರವೇಶ ಪರೀಕ್ಷೆ ನೀಟ್-ಯುಜಿ ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಂಗಳವಾರ ಆದೇಶ ಹೊಡಿಸಿದ್ದು, 2 ಕೇಂದ್ರಗಳಲ್ಲಿ ಮಾತ್ರ ಅಕ್ರಮ ನಡೆದಿದೆ. ದೇಶದೆಲ್ಲೆಡೆ ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆ ಆಗಿದೆ ಎಂಬುದಕ್ಕೆ ಪುರಾವೆ ಇಲ್ಲ. ಹೀಗಾಗಿ ಮರುಪರೀಕ್ಷೆಯ ಪ್ರಶ್ನೆಯೇ ಇಲ್ಲ ಎಂದಿದೆ. ಇದರಿಂದಾಗಿ ಕಳೆದೆರೆಡು ತಿಂಗಳಿಂದ ನಡೆದಿದ್ದ ಪರೀಕ್ಷೆ ಹಗ್ಗ ಜಗ್ಗಾಟಕ್ಕೆ ತೆರೆ ಬಿದ್ದಿದೆ ಕೌನ್ಸೆಲಿಂಗ್ ಹಾದಿ ಸುಗಮವಾಗಿದೆ.
ನೀಟ್ನಲ್ಲಿ ದೇಶವ್ಯಾಪಿ ಅಕ್ರಮ ನಡೆದಿದ್ದು, ಪ್ರಶ್ನೆಪತ್ರಿಕೆಗಳು ಸೋರಿಕೆ ಆಗಿವೆ. ಕೆಲವು ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಮನಬಂದಂತೆ ಗ್ರೇಸ್ ಅಂಕ ನೀಡಲಾಗಿದೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ, ಮರು ಪರೀಕ್ಷೆ ನಡೆಸಬೇಕು ಎಂದು ಅರ್ಜಿಗಳು ಸಲ್ಲಿಕೆ ಆಗಿದ್ದವು. ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ| ಡಿ.ವೈ. ಚಂದ್ರಚೂಡ, ನ್ಯಾ| ಜೆ.ಬಿ. ಪರ್ದೀವಾಲಾ ಹಾಗೂ ನ್ಯಾ| ಮನೋಜ್ ಮಿಶ್ರಾ ಅವರ ಪೀಠ, ಪಟನಾ ಮತ್ತು ಹಜಾರಿಬಾಗ್ ಕೇಂದ್ರಗಳಲ್ಲಿ ಅಕ್ರಮ ನಡೆದಿದೆ ಎಂಬುದು ನಿರ್ವಿವಾದ. ಅಲ್ಲಿನ 155 ವಿದ್ಯಾರ್ಥಿಗಳು ಮಾತ್ರ ಪ್ರಶ್ನೆಪತ್ರಿಕೆ ಸೋರಿಕೆಯ ಫಲಾನುಭವಿಗಳಾಗಿದ್ದಾರೆ ಎಂಬುದು ಸಿಬಿಐ ತನಿಖೆಯಲ್ಲಿ ಬಯಲಾಗಿದೆ. ದೇಶಾದ್ಯಂತ ಪರೀಕ್ಷಾ ಅಕ್ರಮ ನಡೆದಿರುವುದನ್ನು ಸಾಬೀತುಪಡಿಸುವ ಪುರಾವೆಗಳಿಲ್ಲ. ಮರುಪರೀಕ್ಷೆಗೆ ಆದೇಶ ನೀಡಿದರೆ ಪರೀಕ್ಷೆಗೆ ಬರೆದಿದ್ದ 24 ಲಕ್ಷ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮರುಪರೀಕ್ಷೆಗೆ ಆದೇಶ ನೀಡಲಾಗದು ಎಂದಿದೆ.
ಮರುಪರೀಕ್ಷೆಗೆ ಆದೇಶಿಸಿದರೆ ಮುಂದಿನ ವೈದ್ಯಕೀಯ ಕೋರ್ಸುಗಳ ಪ್ರವೇಶಾತಿ ಮೇಲೂ ಪರಿಣಾಮ ಬೀರುತ್ತದೆ. ಮುಂದಿನ ಪ್ರಕ್ರಿಯೆಯೇ ಹಳಿ ತಪ್ಪುತ್ತದೆ. ಭವಿಷ್ಯದಲ್ಲಿ ವೈದ್ಯರ ಲಭ್ಯತೆಯ ಮೇಲೆ ಪರಿಣಾಮ ಬೀರಬಹುದು ಎಂದಿದೆ. ಇದಕ್ಕೂ ಮುನ್ನ ಕೆಲವು ವಾರ ಮೊದಲು ಮಧ್ಯಂತರ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್ ಕೃಪಾಂಕ ಪಡೆದ ಸುಮಾರು 1600 ವಿದ್ಯಾರ್ಥಿಗಳ ಮರುಪರೀಕ್ಷೆಗೆ ಆದೇಶಿಸಿತ್ತು. ಅಲ್ಲದೆ, ಅಕ್ರಮ ಎಷ್ಟು ನಡೆದಿದೆ ಎಂಬುದರ ಮೌಲ್ಯಮಾಪನ ಮಾಡಲು ಕೇಂದ್ರವಾರು ಹಾಗೂ ನಗರವಾರು ಫಲಿತಾಂಶ ಪ್ರಕಟಿಸಬೇಕು ಎಂದು ಸೂಚಿಸಿತ್ತು.