- ಬಾಂಗ್ಲಾ ಹುಲಿಗಳ ಭೇಟೆಯಾಡಿದ ಭಾರತ
- ಬಾಲ್ಗಾಗಿ ಸ್ಟೇಜ್ ಕೆಳಗೆ ನುಗ್ಗಿದ ವಿರಾಟ್ ಕೊಹ್ಲಿ
- ವಿರಾಟ್ ಕೊಹ್ಲಿ ಈ ಸರಳತೆ ಪ್ರಶಂಸಿದ ನೆಟ್ಟಿಗರು
ಟಿ-20 ವಿಶ್ವಕಪ್ನ ಸೂಪರ್-8 ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾ ಹುಲಿಗಳ ಬೇಟೆಯಾಡಿ, 50 ರನ್ಗಳ ಅಂತರದಿಂದ ಜಯಭೇರಿ ಬಾರಿಸಿದೆ. ಮ್ಯಾಚ್ನ ಮೊದಲ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 196 ರನ್ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡ ಆರಂಭದಲ್ಲಿ ದಿಟ್ಟ ಹೋರಾಟವನ್ನೇ ಪ್ರದರ್ಶಿಸಿತ್ತು.
ಬಾಂಗ್ಲಾದೇಶ್ ಇನಿಂಗ್ಸ್ನ 17ನೇ ಓವರ್ನಲ್ಲಿ ಅರ್ಷದೀಪ್ ಸಿಂಗ್ ಎಸೆತದಲ್ಲಿ ರಿಶಾದ್ ಹೊಸೈನ್ ಡೀಪ್ ಮಿಡ್-ವಿಕೆಟ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ್ದರು. ಈ ವೇಳೆ ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೊಹ್ಲಿ ಸಮಯ ವ್ಯರ್ಥ ಮಾಡದೆ ಚೆಂಡನ್ನು ಹೆರಕಲು ಓಡಿದರು. ಆದರೆ ಚೆಂಡು ಪಟಾಕಿ ಸಿಡಿಸುವ ವೇದಿಕೆಯ ಕೆಳಗೆ ನುಗ್ಗಿಯಾಗಿತ್ತು. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ವಿರಾಟ್ ಕೊಹ್ಲಿ ಮಕ್ಕಳಂತೆ ವೇದಿಕೆ ಕೆಳಗೆ ನುಗ್ಗಿ ಚೆಂಡನ್ನು ತೆಗೆದರು. ಇದೀಗ ವಿರಾಟ್ ಕೊಹ್ಲಿಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಾನಾ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಇದೇನು ಗಲ್ಲಿ ಕ್ರಿಕೆಟಾ? ಎಂದು ಅನೇಕರು ಪ್ರಶ್ನಿಸಿದ್ದಾರೆ. ಇನ್ನು ಕ್ರಿಕೆಟ್ ಅಂಗಳದ ಕಿಂಗ್ ಆಗಿ ಮೆರೆಯುತ್ತಿರುವ ವಿರಾಟ್ ಕೊಹ್ಲಿ ಈ ಸರಳತೆಯನ್ನು ಅನೇಕರು ಪ್ರಶಂಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್ ಕಲೆಹಾಕಿತು. 197 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ಪರ ನಾಯಕ ನಜ್ಮುಲ್ ಹೊಸೈನ್ ಶಾಂಟೋ 32 ಎಸೆತಗಳಲ್ಲಿ 40 ರನ್ ಬಾರಿಸಿದ್ದರು. ಇದಾಗ್ಯೂ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಬಾಂಗ್ಲಾದೇಶ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 146 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 50 ರನ್ಗಳ ಭರ್ಜರಿ ಜಯ ಸಾಧಿಸಿದೆ.