ಆಗಸ್ಟ್ 15ರಂದು ದೇಶಾದ್ಯಂತ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದು, ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮನೆ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ದೇಶಾದ್ಯಂತ ತ್ರಿವರ್ಣ ಧ್ವಜ ಯಾತ್ರೆಯನ್ನು ನಡೆಸಲಾಗುತ್ತಿದೆ. ಆದರೆ ತಮಿಳುನಾಡಿನಲ್ಲಿ ತ್ರಿವರ್ಣ ಧ್ವಜ ಮೆರವಣಿಗೆಗೆ ರಾಜ್ಯ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ತಮಿಳುನಾಡು ಸರ್ಕಾರ ಮೋಟಾರ್ ಸೈಕರ್ ರ್ಯಾಲಿ ನಡೆಸಲು ಅನುಮತಿ ನೀಡಿಲ್ಲ ಆಡಳಿತಾರೂಢ ಅಣ್ಣಾ ಡಿಎಂಕೆ ಸರ್ಕಾರಕ್ಕೆ ರಾಷ್ಟ್ರ ಧ್ವಜ ಎಂದರೆ ಇಷ್ಟವಿಲ್ಲ ಎಂದು ಹೇಳಿದ್ದಾರೆ. ಮೆರವಣಿಗೆಯಲ್ಲಿ ಬಿಜೆಪಿ ಧ್ವಜವನ್ನು ಬಳಸುತ್ತಿಲ್ಲ, ಎಲ್ಲರೂ ಕೂಡ ರ್ಯಾಲಿಯಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ. ವಾಹನಗಳು, ರಾಷ್ಟ್ರಧ್ವಜ ಇರುತ್ತದೆ, ಇದು ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಎಲ್ಲಾ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ಪ್ರೇರಿಪಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ತಮಿಳುನಾಡಿನಲ್ಲಿ ಮಾತ್ರ ಇಂತಹ ಅಚ್ಚರಿಯ ಘಟನೆಗಳು ನಡೆಯುತ್ತವೆ. ಡಿಎಂಕೆ ನಾಯಕರಿಗೆ ರಾಷ್ಟ್ರ ಧ್ವಜವೇ ಸಮಸ್ಯೆಯಾಗಿದೆ. ವಾಹನಕ್ಕೆ ಅನುಮತಿ ನಿರಾಕರಿಸುವ ಮೂಲಕ ತಮಗೆ ರಾಷ್ಟ್ರ ಧ್ವಜ ಇಷ್ಟವಿಲ್ಲ ಎಂದು ಸಾಬೀತು ಮಾಡಿದ್ದಾರೆ ಎಂದರು.
ರಾಷ್ಟ್ರಧ್ವಜವನ್ನು ಹಿಡಿದುಕೊಂಡಾಗ ಕಾನೂನು ಸುವ್ಯವಸ್ಥೆ ಸಮಸ್ಯೆ ಹೇಗೆ ಉಂಟಾಗುತ್ತದೆ ಎಂದು ಕೂಡ ಅವರು ಪ್ರಶ್ನೆ ಮಾಡಿದ್ದಾರೆ. ಕೊಯಮತ್ತೂರಿನಲ್ಲಿ ಪದಾಧಿಕಾರಿಗಳು ತ್ರಿವರ್ಣ ಧ್ವಜ ಮೆರವಣಿಗೆ ನಡೆಸಲು ಅನುಮತಿ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರು ಎಂದು ಅಣ್ಣಾಮಲೈ ಹೇಳಿದರು.
ನಿಗದಿತ ದಿನಾಂಕ ಮತ್ತು ಸಮಯಕ್ಕೆ ನಿಗದಿತ ಮಾರ್ಗದಲ್ಲಿ ಮಾತ್ರ ರ್ಯಾಲಿ ನಡೆಸುವುದಾಗಿ ಬಿಜೆಪಿ ಕಾರ್ಯಕರ್ತರು ಹೇಳಿದ್ದಾರೆ. ಆದರೂ ಕೂಡ ಅನುಮತಿ ಕೊಟ್ಟಿಲ್ಲ. ರಾಜ್ಯ ಸರ್ಕಾರವೇ ಇಂತಹ ಕೆಲಸಗಳನ್ನು ಮಾಡಬೇಕು. ಡಿಎಂಕೆ ಅಧ್ಯಕ್ಷರಾಗಿ ಸ್ಟಾಲಿನ್ ಅವರು ತಮ್ಮ ಪಕ್ಷದ ಯುವ ಘಟಕವನ್ನು ಬಳಸಿಕೊಂಡಿ ತ್ರಿವರ್ಣ ಧ್ವಜ ರ್ಯಾಲಿ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ತಮಿಳುನಾಡಿನಲ್ಲಿ ತ್ರಿವರ್ಣ ಧ್ವಜ ಯಾತ್ರೆಗೆ ನಿರಾಕರಿಸುವ ಮೂಲಕ ಈಗ ಮತ್ತೆ ಡಿಎಂಕೆ-ಬಿಜೆಪಿ ನಡುವೆ ತಿಕ್ಕಾಟ ಶುರುವಾಗಿದೆ.