‘ರಾಜಕೀಯ ಎಂಬುದು ಸಿನಿಮಾ ಅಖಾಡ ವಲ್ಲ, ಅದು ಯುದ್ಧದ ಅಖಾಡ. ರಾಜಕೀಯಕ್ಕೆ ನಾನು ಹೊಸಬನಾದರೂ ಮುಗ್ಧ ಬಾಲಕನಲ್ಲ, ನಾನು ಹಾವಿನ ಜತೆ ಆಟವಾಡುವ ಬಾಲಕ’ ಎಂದಿರುವ ಖ್ಯಾತ ತಮಿಳು ನಟ ಹಾಗೂ ನೂತನ ಟಿವಿಕೆ ಪಕ್ಷದ ಸಂಸ್ಥಾಪಕ ವಿಜಯ್, ‘ದ್ರಾವಿಡ ಹೆಸರಿನಲ್ಲಿ ಡಿಎಂಕೆ ರಾಜ್ಯದ ಲೂಟಿ ಮಾಡುತ್ತಿದೆ. ಈ ರಾಜ್ಯದ ದೊಡ್ಡ ಶತ್ರುವೇ ಡಿಎಂಕೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೆ, “ನೇರ ಆಡಳಿತಕ್ಕೆ ಅಡ್ಡಿ ಆಗಿರುವ ರಾಜ್ಯಪಾಲ ಎಂಬ ಹುದ್ದೆಯನ್ನೇ ತೆಗೆದುಹಾಕಬೇಕು” ಎಂದು ಆಗ್ರಹಿಸಿದ್ದಾರೆ. ಪಕ್ಷಸ್ಥಾಪನೆ ಬಳಿಕ ಇದೇ ಮೊದಲ ಬಾರಿ ವಿಲ್ಲುಪುರಂ ನಲ್ಲಿ ಪಕ್ಷದ ಮೊದಲ ರಾಜ್ಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ‘ನಾನು ಪ್ರತ್ಯೇಕ ದ್ರಾವಿಡವಾದ ಮತ್ತು ತಮಿಳುವಾದದ ಪ್ರತಿಪಾದಕನಲ್ಲ. ಇವೆರಡೂ ನಮ್ಮ ನೆಲದ 2 ಕಣ್ಣುಗಳು. ಸಾಮಾಜಿಕ ನ್ಯಾಯದ ಪರ ನಾವು ಕೆಲಸ ಮಾಡಬೇಕು’ ಎಂದರು.
‘ಒಂದು ಕುಟುಂಬವು ಭೂಗತ ಚಟುವಟಿಕೆ ಮೂಲಕ ರಾಜ್ಯವನ್ನು ಲೂಟಿ ಮಾಡುತ್ತಿದೆ. ಇದು ದ್ರಾವಿಡ ಮಾದರಿ ಆಡಳಿತದ ನೆಪದಲ್ಲಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದೆ’ ಎಂದು ಆರೋಪಿಸಿದ ಅವರು, ‘ಇಂಥದ್ದಕ್ಕೆ ಅಂತ್ಯ ಹಾಡಲೆಂದೇ ನಾನು ನಟನೆ ಬಿಟ್ಟು ರಾಜಕೀಯಕ್ಕೆ ಬಂದಿದ್ದೇನೆ. ಪೆರಿಯಾರ್ ಹಾಗೂ ಕಾಮರಾಜ್ ತತ್ವ ಅಳವಡಿಸಿಕೊಂಡ ಪಕ್ಷ ನಮ್ಮದು’ ಎಂದರು.
ಇದನ್ನೂ ಓದಿ: ಐಶು-ಅಭಿ ಮಧ್ಯೆ ಬಿರುಕು: ನಿಮ್ರತ್ ಹೇಳಿಕೆ ಈಗ ಚುರುಕು!
ನಟ ವಿಜಯ್ ಕಳೆದ ಫೆಬ್ರವರಿಯಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷವನ್ನು ಪ್ರಾರಂಭಿಸುವ ಮೂಲಕ ರಾಜಕೀಯ ಪ್ರವೇಶಿಸಿದ್ದರು. 2026ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ಅವರ ಪಕ್ಷ ಸ್ಪರ್ಧಿಸುವ ಸಾಧ್ಯತೆ ಇದೆ.