ಬಿಎಸ್ ಪಿ ಪಕ್ಷದ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ. ಆರ್ಮ್ಸ್ಟ್ರಾಂಗ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜುಲೈ 5 ರ ಸಂಜೆ ನಡೆದಿದೆ. ಚೆನ್ನೈನ ಪೆರಂಬೂರ್ನಲ್ಲಿರುವ ಅವರ ಮನೆಯ ಬಳಿಯೇ ಕೃತ್ಯ ನಡೆದಿದೆ. ಸುಮಾರು 6 ಜನ ದುಷ್ಕರ್ಮಿಗಳು ಬೈಕ್ನಲ್ಲಿ ಆಗಮಿಸಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆರ್ಮ್ಸ್ಟ್ರಾಂಗ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಘಟನೆಯ ಬಳಿಕ ಹಂತಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಈ ನಡುವೆ 8 ಮಂದಿ ಅಣ್ಣಾನಗರ ಸಹಾಯಕ ಪೊಲೀಸ್ ಆಯುಕ್ತರ ಮುಂದೆ ಶರಣಾಗಿದ್ದಾರೆ. ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರ್ಮ್ಸ್ಟ್ರಾಂಗ್ ಹತ್ಯೆಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಮಧ್ಯರಾತ್ರಿಯ ಕಾರ್ಯಾಚರಣೆಯಲ್ಲಿ ಹಂತಕರನ್ನು ಬಂಧಿಸಲಾಗಿದೆ ಎಂದು ಸ್ಟಾಲಿನ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆರ್ಮ್ಸ್ಟ್ರಾಂಗ್ ಹತ್ಯೆ ಕುರಿತು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಪ್ರತಿಕ್ರಿಯಿಸಿದ್ದು, “ಆರ್ಮ್ಸ್ಟ್ರಾಂಗ್ ಹತ್ಯೆ ಖಂಡನೀಯ. ವೃತ್ತಿಯಲ್ಲಿ ವಕೀಲರಾಗಿದ್ದ ಅವರು, ದಲಿತರ ಪರ ಗಟ್ಟಿ ಧ್ವನಿಯಾಗಿದ್ದರು. ರಾಜ್ಯ ಸರ್ಕಾರ ತಪ್ಪಿತಸ್ಥರನ್ನು ಶಿಕ್ಷಿಸಬೇಕು” ಎಂದು ಹೇಳಿದ್ದಾರೆ. ತಪ್ಪಿತಸ್ಥರ ಪತ್ತೆ ಮತ್ತು ಪ್ರಕರಣದ ತನಿಖೆಗಾಗಿ 10 ವಿಶೇಷ ತಂಡಗಳನ್ನು ರಚಿಸಲಾಗಿದೆ. ಚೆನ್ನೈ ಉತ್ತರ ಸಹಾಯಕ ಪೊಲೀಸ್ ಆಯುಕ್ತ ಅಸ್ರಾ ಗಾರ್ಗ್ ತನಿಖೆಯ ಉಸ್ತುವಾರಿ ವಹಿಸಿದ್ದಾರೆ.