ಚೆನ್ನೈ: ಕೊಳಚೆ ನೀರಿನಿಂದ ಕಲುಷಿತಗೊಂಡ ಕುಡಿಯುವ ನೀರು ಸೇವಿಸಿ ಮೂವರು ಮೃತಪಟ್ಟಿದ್ದು, 20 ಮಂದಿ ಅಸ್ವಸ್ಥರಾಗಿರುವ ಘಟನೆ ಚೆನ್ನೈ ಬಳಿಯ ಪಲ್ಲವರಂನಲ್ಲಿ ನಡೆದಿದೆ.
ಮೃತರನ್ನು ವರಲಕ್ಷ್ಮಿ (88) ತಿರುವೀತಿ (56), ಮೋಹನರಂಗಂ (42), ಎಂದು ಗುರುತಿಸಲಾಗಿದ್ದು, 20 ಜನ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನು ಕ್ರೋಮ್ಪೇಟೆ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನೂ ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಫೆಂಗಲ್ ಚಂಡಮಾರುತದಿಂದಾಗಿ ಪಲ್ಲಾವರಂನಲ್ಲಿ ಇತ್ತೀಚಿಗೆ ಸುರಿದ ಮಳೆಯ ಪರಿಣಾಮ ಕೊಳಚೆ ನೀರು ಮತ್ತು ಕುಡಿಯುವ ನೀರು ಮಿಶ್ರಣವಾಗಿ ಕಲುಷಿತಗೊಂಡಿದೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
ತಮಿಳುನಾಡು ಆರೋಗ್ಯ ಸಚಿವ ಮಾ.ಸುಬ್ರಮಣಿಯನ್ ಆಸ್ಪತ್ರೆಗೆ ಭೇಟಿ ನೀಡಿ, ಅಸ್ವಸ್ಥರಾದವರ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.
ವೈದ್ಯರ ಮಾಹಿತಿಯ ಆಧಾರದ ಮೇಲೆ, ಪಲ್ಲಾವರಂನ ಕಾಮರಾಜ್ನಗರ ಹಾಗೂ ಮನಲ್ಮೇಡು ನಿವಾಸಿಗಳು ಕಳೆದ ಮೂರು ದಿನಗಳಿಂದ ವಾಂತಿ ಹಾಗೂ ಭೇದಿ ಲಕ್ಷಣಗಳೊಂದಿಗೆ ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದಾರೆ. ಇಲ್ಲಿಯವರೆಗೂ ಒಟ್ಟು 34 ಚಿಕಿತ್ಸೆ ಪಡೆದಿದ್ದು, 14 ಮಂದಿ ಬಿಡುಗಡೆಯಾಗಿದ್ದಾರೆ. 19 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.