ಬಿಎಸ್ ಪಿ ಪಕ್ಷದ ತಮಿಳುನಾಡು ಅಧ್ಯಕ್ಷ ಕೆ ಆರ್ಮ್ಸ್ಟ್ರಾಂಗ್ ಹತ್ಯೆಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಶನಿವಾರ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಮಧ್ಯರಾತ್ರಿಯ ಕಾರ್ಯಾಚರಣೆಯಲ್ಲಿ ಹಂತಕರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಆರ್ಮ್ಸ್ಟ್ರಾಂಗ್ ಹತ್ಯೆಯಿಂದ ತೀವ್ರ ಆಘಾತ ಮತ್ತು ದುಃಖವಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ತಿಳಿಸಿದ್ದಾರೆ.
ತನಿಖೆಯನ್ನು ತ್ವರಿತವಾಗಿ ನಡೆಸಿ ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಪೊಲೀಸರಿಗೆ ಆದೇಶಿಸಿದ್ದೇನೆ. ದುಃಖತಪ್ತ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪ ಮತ್ತು ಸಹಾನುಭೂತಿ ತಿಳಿಸಲು ನಾನು ಬಯಸುತ್ತೇನೆ ಎಂದು ತಮಿಳುನಾಡು ಸಿಎಂ ಹೇಳಿದ್ದಾರೆ.
ಬಿಎಸ್ಪಿ ರಾಜ್ಯಾಧ್ಯಕ್ಷರ ಹತ್ಯೆಗೆ ಸಂಬಂಧಿಸಿದಂತೆ ಕನಿಷ್ಠ ಎಂಟು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣವನ್ನು ಭೇದಿಸಲು ಪೊಲೀಸರ 10 ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸರು ಮಾಹಿತಿ ನೀಡಿದ್ದಾರೆ.