ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಈ ಪಂದ್ಯದ ಮೊದಲ ದಿನದಾಟವು ಮಳೆಯ ಕಾರಣ ರದ್ದಾಗಿತ್ತು. ಇನ್ನು 2ನೇ ದಿನದಾಟದಲ್ಲಿ ಶುರುವಾದ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ 46 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ತಂಡವು ರಚಿನ್ ರವೀಂದ್ರ (113) ಅವರ ಶತಕದ ನೆರವಿನಿಂದ 402 ರನ್ಗಳಿಸಿ ಆಲೌಟ್ ಆಯಿತು. 356 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 71 ರನ್ ಪೇರಿಸಿದ ಬಳಿಕ ಜೈಸ್ವಾಲ್ (35) ಔಟಾದರು.
ಇನ್ನು 63 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 52 ರನ್ ಬಾರಿಸಿ ರೋಹಿತ್ ಶರ್ಮಾ ಕೂಡ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ ಹಾಗೂ ಸರ್ಫರಾಝ್ ಖಾನ್ ಶತಕದ ಜೊತೆಯಾಟದ ಮೂಲಕ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಆದರೆ ಮೂರನೇ ದಿನದಾಟದ ಅಂತಿಮ ಓವರ್ನ ಕೊನೆಯ ಎಸೆತದಲ್ಲಿ ವಿರಾಟ್ ಕೊಹ್ಲಿ (70) ವಿಕೆಟ್ ಕೀಪರ್ಗೆ ಕ್ಯಾಚಿತ್ತು ನಿರಾಸೆ ಮೂಡಿಸಿದರು. ಇನ್ನು ನಾಲ್ಕನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಸರ್ಫರಾಝ್ ಖಾನ್ 110 ಎಸೆತಗಳಲ್ಲಿ 13 ಫೋರ್ ಹಾಗೂ 3 ಸಿಕ್ಸ್ಗಳೊಂದಿಗೆ ಶತಕ ಪೂರೈಸಿದರು.