ಸದ್ಯ ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕೂಟದಿಂದ ಆಲ್ ರೌಂಡರ್ ಶ್ರೇಯಾಂಕಾ ಪಾಟೀಲ್ ಹೊರಬಿದ್ದಿದ್ದಾರೆ. ಪಾಕಿಸ್ತಾನ ವಿರುದ್ದದ ಮೊದಲ ಪಂದ್ಯದಲ್ಲಿ ಆಡಿದ್ದ ಕನ್ನಡತಿ ಶ್ರೇಯಾಂಕಾ ಏಷ್ಯಾ ಕಪ್ ಪಯಣ ಒಂದೇ ಪಂದ್ಯಕ್ಕೆ ಅಂತ್ಯವಾಗಿದೆ. ಜುಲೈ 19ರಂದು ರಣಗಿರಿ ಡಂಬುಲಾ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ದ ಪಂದ್ಯದಲ್ಲಿ ಶ್ರೇಯಾಂಕಾ ಗಾಯಗೊಂಡಿದ್ದರು. ಈ ಪಂದ್ಯದಲ್ಲಿ ಕ್ಯಾಚ್ ಪಡೆಯಲು ಹೋದಾಗ ಶ್ರೇಯಾಂಕಾ ಬೆರಳಿಗೆ ಗಾಯ ಮಾಡಿಕೊಂಡಿದ್ದರು. 2024ರ ಡಬ್ಲ್ಯೂಪಿಎಲ್ ನಲ್ಲಿ ಆರ್ ಸಿಬಿ ಪರವಾಗಿ ಆಡುತ್ತಿದ್ದ ವೇಳೆ ಶ್ರೇಯಾಂಕಾ ಇದೇ ಬೆರಳಿಗೆ ಗಾಯವಾಗಿತ್ತು.
ಡಬ್ಲ್ಯೂಪಿಎಲ್ ನಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದ್ದ ಶ್ರೇಯಾಂಕಾ ಅತಿ ಹೆಚ್ಚು ವಿಕೆಟ್ ಪಡೆದಿದ್ದರು. ಸರಣಿಯ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಯನ್ನು ಗೆದ್ದರು. ಡೆಲ್ಲಿ ವಿರುದ್ಧದ ಫೈನಲ್ ನಲ್ಲಿ ನಾಲ್ಕು ವಿಕೆಟ್ಗಳನ್ನು ಪಡೆದು ಆರ್ ಸಿಬಿ ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲಲು ಸಹಾಯ ಮಾಡಿದರು. ಆದರೆ ಪಾಕಿಸ್ತಾನದ ವಿರುದ್ಧದ ಗಾಯವು ಅವರನ್ನು ಕೂಟದಿಂದಲೇ ಹೊರ ಹಾಕಿದೆ.