ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲೂ ನ್ಯೂಝಿಲೆಂಡ್ ತಂಡ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಕಿವೀಸ್ ಪಡೆ ಭಾರತದಲ್ಲಿ ಚೊಚ್ಚಲ ಬಾರಿಗೆ ಸರಣಿ ಗೆದ್ದುಕೊಂಡಿದೆ. ಅಂದರೆ 92 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನ್ಯೂಝಿಲೆಂಡ್ ತಂಡವು ಭಾರತದಲ್ಲಿ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಭಾರತ ತಂಡವನ್ನು 3-0 ಅಂತರದಿಂದ ಸೋಲಿಸಿ ತವರಿನಲ್ಲಿ ಟೀಮ್ ಇಂಡಿಯಾವನ್ನು ವೈಟ್ ವಾಶ್ ಮಾಡಿದ ಐತಿಹಾಸಿಕ ಸಾಧನೆಯನ್ನು ಸಹ ಮಾಡಿದೆ.
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಟಾಮ್ ಲ್ಯಾಥಮ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಇನಿಂಗ್ಸ್ ಆಡಿದ ನ್ಯೂಝಿಲೆಂಡ್ ತಂಡವು ಡೇರಿಲ್ ಮಿಚೆಲ್ (82) ಅವರ ಅರ್ಧಶತಕದ ನೆರವಿನಿಂದ 235 ರನ್ಗಳಿಸಿ ಆಲೌಟ್ ಆಯಿತು. ಟೀಮ್ ಇಂಡಿಯಾ ಪರ ರವೀಂದ್ರ ಜಡೇಜಾ 5 ವಿಕೆಟ್ ಕಬಳಿಸಿದರೆ, ವಾಷಿಂಗ್ಟನ್ ಸುಂದರ್ 4 ವಿಕೆಟ್ ಪಡೆದು ಮಿಂಚಿದರು.
ಇದರ ಬೆನ್ನಲ್ಲೇ ಪ್ರಥಮ ಇನಿಂಗ್ಸ್ ಶುರು ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಶುಭ್ಮನ್ ಗಿಲ್ (90) ಹಾಗೂ ರಿಷಭ್ ಪಂತ್ (60) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಎರಡು ಅರ್ಧಶತಕಗಳ ನೆರವಿನಿಂದ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 263 ರನ್ ಕಲೆಹಾಕಿತು.
ಪ್ರಥಮ ಇನಿಂಗ್ಸ್ನಲ್ಲಿನ 28 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಕಿವೀಸ್ ಬ್ಯಾಟರ್ಗಳು ಭಾರತೀಯ ಸ್ಪಿನ್ನರ್ಗಳ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ ನ್ಯೂಝಿಲೆಂಡ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 174 ರನ್ಗಳಿಗೆ ಆಲೌಟ್ ಆಗಿದೆ. ಭಾರತದ ಪರ ರವೀಂದ್ರ ಜಡೇಜಾ 55 ರನ್ ನೀಡಿ 5 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.
ಅತ್ತ ಮೊದಲ ಇನಿಂಗ್ಸ್ನಲ್ಲಿ ಮುನ್ನಡೆಯೊಂದಿಗೆ 147 ರನ್ಗಳ ಗುರಿ ಪಡೆದ ಭಾರತ ತಂಡವು ಕಳಪೆ ಆರಂಭ ಪಡೆಯಿತು. ಕೇವಲ 29 ರನ್ಗಳಿಸುವಷ್ಟರಲ್ಲಿ ರೋಹಿತ್ ಶರ್ಮಾ (11), ಶುಭ್ಮನ್ ಗಿಲ್ (1), ವಿರಾಟ್ ಕೊಹ್ಲಿ (1), ಯಶಸ್ವಿ ಜೈಸ್ವಾಲ್ (5) ಹಾಗೂ ಸರ್ಫರಾಝ್ ಖಾನ್ (1) ಪೆವಿಲಿಯನ್ ಸೇರಿದ್ದರು.
ಈ ಹಂತದಲ್ಲಿ ಜೊತೆಗೂಡಿದ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಭಾರತ ತಂಡಕ್ಕೆ ಆಸರೆಯಾಗಿ ನಿಂತರು. ಆದರೆ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಜಡೇಜಾ 6 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ರಿಷಭ್ ಪಂತ್ 48 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಈ ಅರ್ಧಶತಕದ ಮೂಲಕ ಟೀಮ್ ಇಂಡಿಯಾ ಮೊತ್ತವನ್ನು 100ರ ಗಡಿದಾಟಿಸಿದ ರಿಷಭ್ ಪಂತ್ 57 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 64 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 46 ರನ್ಗಳ ಅವಶ್ಯಕತೆಯಿತ್ತು.
ಆದರೆ ಆ ಬಳಿಕ ಬಂದ ಅಶ್ವಿನ್ 8 ರನ್ಗಳಿಸಿ ಔಟಾದರೆ, ಆಕಾಶ್ ದೀಪ್ (0) ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ 121 ರನ್ಗಳಿಗೆ ಆಲೌಟ್ ಆಗುವ ಮೂಲಕ ಟೀಮ್ ಇಂಡಿಯಾ 25 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ಈ ಗೆಲುವಿನೊಂದಿಗೆ ನ್ಯೂಝಿಲೆಂಡ್ ತಂಡವು ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದ್ದು, ಈ ಮೂಲಕ ಭಾರತ ತಂಡವನ್ನು ತವರಿನಲ್ಲೇ ವೈಟ್ ವಾಶ್ ಮಾಡಿದ ಐತಿಹಾಸಿಕ ಸಾಧನೆ ಮಾಡಿದೆ.