ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ 4ಜಿ ಮತ್ತು 5ಜಿ ಬೆಂಬಲಿತ ಓವರ್ ದಿ ಏರ್ ಮತ್ತು ಯೂನಿವರ್ಸಲ್ ಸಿಮ್ ಪ್ಲಾಟ್ಫಾರ್ಮ್ ಅನ್ನು ಬಿಡುಗಡೆ ಮಾಡುತ್ತಿದೆ. ಪೈರೋ ಹೋಲ್ಡಿಂಗ್ಸ್ ಪ್ರೈ.ಲಿ ಸಂಸ್ಥೆ ಜೊತೆ ಸೇರಿ ಬಿಎಸ್ಸೆನ್ನೆಲ್ ಅಭಿವೃದ್ಧಿಪಡಿಸಿರುವ ಈ ಪ್ಲಾಟ್ಫಾರ್ಮ್, ಅದರ ಗ್ರಾಹಕರಿಗೆ ಉತ್ತಮ ಕನೆಕ್ಟಿವಿಟಿ ಮತ್ತು ಗುಣಮಟ್ಟದ ಸೇವೆ ಒದಗಿಸಬಲ್ಲುದು. ಈ ಸರ್ವಿಸ್ನ ವಿಶೇಷತೆ ಎಂದರೆ ಬಿಎಸ್ಸೆನ್ನೆಲ್ ಗ್ರಾಹಕರು ದೇಶದ ಯಾವುದೇ ಭಾಗದಲ್ಲಾದರೂ ಸಿಮ್ ಬದಲಾಯಿಸಿಕೊಳ್ಳಬಹುದು ಮತ್ತು ಮೊಬೈಲ್ ನಂಬರ್ಗಳನ್ನು ಆಯ್ದುಕೊಳ್ಳಬಹುದು.
ಚಂದೀಗಢದಲ್ಲಿ ಮೊನ್ನೆ ಈ ಯೋಜನೆ ಆರಂಭಿಸಲಾಗಿದೆ. ‘ದೇಶದ ಯಾವುದೇ ಭಾಗದಲ್ಲೂ ಸಿಮ್ ಸ್ವ್ಯಾಪ್ ಮಾಡಲು ಇದು ಸಹಾಯವಾಗುತ್ತದೆ. ಸರ್ಕಾರದ ಆತ್ಮನಿರ್ಭರ ಭಾರತದ ಗುರಿ ಈಡೇರಿಕೆಗೆ ಇದು ನೆರವಾಗುತ್ತದೆ. ಗ್ರಾಮೀಣ ಭಾಗದ ಮತ್ತು ದೂರದ ಪ್ರದೇಶಗಳಲ್ಲಿ ಜನರಿಗೆ ಇದು ನೆರವಾಗುತ್ತದೆ. ಇತರ ಪ್ರದೇಶಗಳೊಂದಿಗೆ ಇರುವ ಡಿಜಿಟಲ್ ಅಸಮಾನತೆಯನ್ನು ಇದು ನೀಗಿಸುತ್ತದೆ’ ಎಂದು ಬಿಎಸ್ಸೆನ್ನೆಲ್ನ ಛೇರ್ಮನ್ ಮತ್ತು ಎಂಡಿ ರವಿ ಜೆರಾರ್ಡ್ ಹೇಳಿದ್ದಾರೆ.
ಕೇಂದ್ರ ದೂರಸಂಪರ್ಕ ಇಲಾಖೆ ತನ್ನ ಸೋಷಿಯಲ್ ಮೀಡಿಯಾ ಪೋಸ್ಟ್ಗಳಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. 4ಜಿ ಮತ್ತು 5ಜಿ ಸಿದ್ಧವಿರುವ ಸಿಮ್ ಪ್ಲಾಟ್ಫಾರ್ಮ್ ಅನ್ನು ಶೀಘ್ರದಲ್ಲೇ ಹೊರತರುತ್ತಿರುವುದಾಗಿ ಶನಿವಾರ ಹೇಳಿದೆ.