ಅಲ್ಲು ಅರ್ಜುನ್ ನಿಜಕ್ಕೂ ಒಬ್ಬ ಮನುಷ್ಯನಾ..? ಪುಷ್ಪ ಖ್ಯಾತಿಯ ಅಲ್ಲು ಅರ್ಜುನ್ ವಿರುದ್ಧ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ತೆಲಂಗಾಣದ ವಿಧಾನಸಭೆಯಲ್ಲಿ ಅಲ್ಲು ಅರ್ಜುನ್ ಅರೆಸ್ಟ್ ಬಗ್ಗೆಯೇ ಮಾತು.
ಅಲ್ಲು ಅರ್ಜುನ್ ವಿರುದ್ಧ ಸಿಎಂ ರೇವಂತ್ ರೆಡ್ಡಿ ಕೆಂಡಾಮಂಡಲರಾಗಿದ್ದಾರೆ. ಅಲ್ಲು ಅರ್ಜುನ್ ಕೈ ಮುರೀತಾ.. ಕಾಲು ಮುರೀತಾ.. ಏನೂ ಇಲ್ಲ.. ಚಿತ್ರರಂಗದವರೆಲ್ಲ ಆತನ ಮನೆಗೆ ಹೋಗಿ ವಿಷ್ ಮಾಡ್ತಿದ್ದಾರೆ.. ಯಾಕೆ ಆತನ ಮನೆಗೆ ಹೋಗುತ್ತಿದ್ದಾರೆ..? ಮಾನವೀಯತೆಯೇ ಇಲ್ಲ.. ಪುಷ್ಪ ಸಿನಿಮಾ ಸೂಪರ್ ಹಿಟ್ ಆಗಿದೆ.. ಆತ ಲಾಭ ಮಾಡ್ಕೊಂಡ.. ಆತನಿಂದಾಗಿ ಮೃತಪಟ್ಟ ಕುಟುಂಬದವರಿಗೆ ಏನು ಸಿಕ್ಕಿತು..? ಎಂದು ಅಲ್ಲು ಅರ್ಜುನ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ ರೇವಂತ್ ರೆಡ್ಡಿ.
ಡಿಸೆಂಬರ್ 4ರಂದು ರಕ್ಷಣೆ ಬೇಕು ಎಂದು ಥಿಯೇಟರಿನವರು ಕೇಳಿದ್ದು ನಿಜ. ಥಿಯೇಟರಿಗೆ ಒಂದೇ ಎಕ್ಸಿಟ್ ಡೋರ್ ಇತ್ತು ಎಂಬ ಕಾರಣಕ್ಕೆ ನಿರಾಕರಿಸಲಾಗಿತ್ತು. ಭದ್ರತೆ ಕೊಡುವುದಕ್ಕೆ ಸಾಧ್ಯ ಇಲ್ಲ ಎಂದರೂ ಆ ನಟ ಬಂದಿದ್ದು ಏಕೆ..? ಪೊಲೀಸರ ಎಚ್ಚರಿಕೆ ಕಡೆಗಣಿಸಿ ಅಲ್ಲು ಅರ್ಜುನ್ ಅತಿರೇಕದ ವರ್ತನೆ ಮಾಡಿದರು. ಅಲ್ಲು ಅರ್ಜುನ್ ಬಗ್ಗೆ ಇರುವ ಕರುಣೆ, ಅನುಕಂಪ ಮೃತಪಟ್ಟವರ ಬಗ್ಗೆ ಏಕಿಲ್ಲ..? ಮೃತರ ಕುಟುಂಬದವರನ್ನು ಆಸ್ಪತ್ರೆಯಲ್ಲಿರುವ ಆ ಮಗುವನ್ನು ಭೇಟಿ ಮಾಡಿದ್ದಾರಾ..? ಕನಿಷ್ಠ ಪಕ್ಷದ ಮಾನವೀಯತೆ ಇಲ್ಲದೆ ವರ್ತಿಸಿದವರ ಬಗ್ಗೆ ಏಕಿಷ್ಟು ಅನುಕಂಪ..?
ನೀವು ಸಿನಿಮಾ ಮಾಡ್ತೀರಿ, ಬಿಸಿನೆಸ್ ಮಾಡ್ತೀರಿ, ಸರ್ಕಾರದಿಂದ ವಿನಾಯಿತಿ ಪಡೆದುಕೊಳ್ತೀರಿ. ನೀವು ದುಡ್ಡು ಮಾಡ್ತೀರಿ, ಲಾಭ ಮಾಡಿಕೊಳ್ತೀರಿ.. ಜನರಿಗೆ ಏನು ಮಾಡ್ತೀರಿ..? ನಿಮ್ಮ ಲಾಭಕ್ಕೆ ಜೀವ ಬಲಿಯಾದರೂ ಸರ್ಕಾರ ಸುಮ್ಮನೆ ಕೂರಬೇಕಿತ್ತಾ..? ತೆಲಂಗಾಣದಲ್ಲಿ ನಾನು ಸಿಎಂ ಆಗಿರುವವರೆಗೆ ಇಂಥದ್ದಕ್ಕೆಲ್ಲ ಅವಕಾಶ ಇಲ್ಲ. ಸಿನಿಮಾ ಮಂದಿ ದುರಾಸೆಗೆ ನಾವು ರಾಜ್ಯದ ಜನರನ್ನು ಬಲಿ ಕೊಡುವುದಕ್ಕೆ ಆಗಲ್ಲ. ಇನ್ನು ಮುಂದೆ ಪೇಯ್ಡ್ ಪ್ರೀಮಿಯರ್ ಶೋ ನಡೆಯುವುದಕ್ಕೆ ಬಿಡಲ್ಲ. ಇಂತಹ ಘಟನೆಗಳು ಇನ್ನು ಮುಂದೆ ನಡೆಯುವುದಕ್ಕೆ ಬಿಡುವುದಿಲ್ಲ ಎಂದು ಪುಷ್ಪ ಅಲ್ಲು ಅರ್ಜುನ್ ವಿರುದ್ಧ ಹಿಗ್ಗಾಮುಗ್ಗಾ ದಾಳಿ ನಡೆಸಿದ್ದಾರೆ ಸಿಎಂ ರೇವಂತ್ ರೆಡ್ಡಿ.