ಗಾಂಧಿ ಜಯಂತಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಗಾಂಧೀಜಿ ಅಧ್ಯಕ್ಷತೆಗೆ 100 ವರ್ಷಗಳ ಸಂಭ್ರಮ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ “ಗಾಂಧಿ ನಡಿಗೆ” ಕಾರ್ಯಕ್ರಮ ನಡೆಸಿತು. ಗಾಂಧಿ ನಡಿಗೆ ಕಾರ್ಯಕ್ರಮ ಅಂಗವಾಗಿ ಬೆಂಗಳೂರಿನ ಗಾಂಧಿ ಭವನದಿಂದ ವಿಧಾನಸೌಧದವರೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಚಿವರಾದ ಹೆಚ್.ಕೆ.ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಪ್ರಿಯಾಂಕ್ ಖರ್ಗೆ ಕಾಲ್ನಡಿಗೆಯಲ್ಲಿ ಸಾಗಿದರು. ಮುಖ್ಯಮಂತ್ರಿಗಳಿಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಶಾಸಕ ರಿಜ್ವಾನ್ ಸೇರಿ ಹಲವರು ಸಾಥ್ ನೀಡಿದರು.
ನಡಿಗೆ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರು ನಾಯಕತ್ವ ವಹಿಸಿದ್ದರು. ಮಹಾತ್ಮ ಗಾಂಧೀಜಿಯವರ ಆಚಾರ ವಿಚಾರ ಅಳವಡಿಸಿಕೊಳ್ಳಬೇಕು. ಕೆಪಿಸಿಸಿಯಿಂದ ನಾವು ಪ್ರತ್ಯೇಕ ಕಾರ್ಯಕ್ರಮ ಮಾಡುತ್ತಿದ್ದೇವೆ. ಸ್ವಚ್ಛತೆ ಕಾರ್ಯಕ್ರಮ ಮಾಡಲು ಮಕ್ಕಳಿಗೆ ಪ್ರತಿಜ್ಞೆ ಮಾಡುತ್ತಿದ್ದೇವೆ. ಎಲ್ಲ ಮಂತ್ರಿಗಳು, ಶಾಸಕರಿಗೆ ಆಯಾ ಜಿಲ್ಲೆಗಳಲ್ಲಿ ಸ್ವಚ್ಛತೆ ಕಾರ್ಯ ಮಾಡಿ ಎಂದು ಸೂಚಿಸಿದ್ದೇವೆ ಎಂದು ಹೇಳಿದರು.