ಕೊಟ್ಟಾರೆ ಕೊಡು ಶಿವನೇ ಕುಡುಕನಲ್ಲದ ಗಂಡನ..ಎಂಬ ಆಧುನಿಕ ಜಾನಪದ ಗೀತೆ ಉತ್ತರ ಕರ್ನಾಟಕದಲ್ಲಿ ಫೇಮಸ್. ಖಾಲಿ ಕ್ವಾರ್ಟರ್ ಬಾಟ್ಲಿ ಹಂಗೆ ಲೈಫು.. ಆಚೆಗಾಕವ್ಳೆ ವೈಫು.. ಅನ್ನೋದು ಕುಡುಕ ಗಂಡಸರು ಕುಡಿದ ಮೇಲೆ ಹಾಡುವ ಜನಪ್ರಿಯ ಗೀತೆ.ಇನ್ನು ಕುಡಿದು ಟೈಟಾದ ಮೇಲೆ ನಾನ್ ಮನೆಗ್ ಹೋಗೋದಿಲ್ಲ… ಎಂದೂ ಹಾಡ್ತಾರೆ. ಕುಡುಕ ಗಂಡಸರು. ಆದರೆ ಇದೆಲ್ಲ ಮದುವೆಯಾದ ಮೇಲಿನ ಗೀತೆಗಳು. ಆದರೆ ಮದುವೆಗೆ ಮುಂಚೆಯೇ ಹುಚ್ಚಾಪಟ್ಟೆ ಕುಡಿದರೆ ಏನಾಗುತ್ತದೆ ಎನ್ನುವುದಕ್ಕೆ ಉತ್ತರ ಪ್ರದೇಶದಲ್ಲಿ ನಡೆದ ಮದುವೆ ಸಾಕ್ಷಿಯಾಗಿದೆ.
ಉತ್ತರ ಪ್ರದೇಶದ ಪ್ರತಾಪ್ಗಢದ ಬಕ್ಷಿದಿ ಗ್ರಾಮದಲ್ಲಿ ಸಂಜಯ್ ದಾಸ್ ಎಂಬುವರ ಮಗಳ ಮದುವೆ ಫಿಕ್ಸ್ ಆಗಿತ್ತು. ಮಗಳ ಮದುವೆಯನ್ನು ಕರನ್ಪುರ ಖುಜಿ ಗ್ರಾಮದ ಜೀತ್ಲಾಲ್ ಅವರ ಮಗ ಅನೀಶ್ ಜೊತೆ ಅದ್ಧೂರಿಯಾಗಿ ನಡೆಸುವುದಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಮದುವೆ ಹಿಂದಿನ ದಿನ ರಾತ್ರಿ ಮೆರವಣಿಗೆ ಮೂಲಕ ವರನು ವಧುವಿನ ಮನೆ ಬಳಿ ಬಂದಾಗ, ವರ ಕುಡಿದಿದ್ದ. ವರನ ಬಾಯಿಂದ ಗಪ್ ಎಂದು ಮದ್ಯದ ವಾಸನೆ ಮೂಗಿಗೆ ಹೊಡೆದಾಗ, ಮದುಮಗಳು ಕೋಪಗೊಂಡಳು. ಜೊತೆಗೆ ಕುಡಿದ ಮತ್ತಿನಲ್ಲಿ ಮದುಮಗ ಕೆಟ್ಟಾ ಕೊಳಕು ಭಾಷೆಯಲ್ಲಿ ಮಾತನಾಡುತ್ತಿದ್ದದ್ದನ್ನೂ ಗಮನಿಸಿದಳು. ಇಂತಹ ಕುಡುಕನ ಜೊತೆ ತಾನು ಮದುವೆಯಾಗಬೇಕಾ ಎಂದು ಪ್ರಶ್ನಿಸಿಕೊಂಡ ಯುವತಿ, ಮದುವೆಗೆ ನೋ ಎಂದುಬಿಟ್ಟಳು.
ಅದಾದ ಮೇಲೆ ವಧುವಿನ ಕಡೆಯವರು ಸುಮ್ಮನಾಗಲಿಲ್ಲ. ವರ ಮತ್ತು ಅವನ ತಂದೆಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿದರು. ಪೊಲೀಸರನ್ನೂ ಕರೆಸಿದರು. ನ್ಯಾಯ ಪಂಚಾಯ್ತಿ ನಡೆದು ಕೊನೆಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ವರನ ಕಡೆಯವರು ಮದುವೆಯ ಖರ್ಚನ್ನೆಲ್ಲ ಭರಿಸುವಂತೆ ಮಾಡಿದರು.
ಮದುವೆಯ ಖರ್ಚಾಗಿ 95 ಸಾವಿರ ರೂಪಾಯಿಗಳನ್ನು ವಧುವಿನ ತಂದೆಗೆ ಕೊಟ್ಟು ಕ್ಷಮೆ ಕೇಳಿದರು. ಮದುವೆಗೆ ಕೊಟ್ಟಿದ್ದ ಒಡವೆ, ಹಣವನ್ನೂ ವಾಪಸ್ ಪಡೆಯಲಾಯಿತು. ಅಷ್ಟೇ ಅಲ್ಲ, ಕೊಟ್ಟಿದ್ದ ಉಡುಗೊರೆಗಳನ್ನೂ ವಾಪಸ್ ಪಡೆದು, ಯಾರ್ ಯಾರು ಗಿಫ್ಟ್ ಕೊಟ್ಟಿದ್ದಾರೋ, ಅವರಿಗೇ ಹಿಂದಿರುಗಿಸಲಾಯಿತು. ಇಷ್ಟೆಲ್ಲ ಆಗುವವರೆಗೆ ಮದುಮಗ ಮತ್ತು ವರನನ್ನು ವಧುವಿನ ಕಡೆಯವರು ಹೊರಗೆ ಹೋಗಲು ಬಿಡಲಿಲ್ಲ. ಒಟ್ಟಿನಲ್ಲಿ ಕುಡಿತ, ನಡೆಯಬೇಕಿದ್ದ ಮದುವೆಯನ್ನೇ ಕ್ಯಾನ್ಸಲ್ ಆಗುವಂತೆ ಮಾಡಿದೆ.