ಮಕರ ಸಂಕ್ರಾಂತಿ ಹಬ್ಬದ ಆಚರಣೆಗೆ ನಗರ ಸಜ್ಜಾಗಿದ್ದು, ವಿವಿಧ ಮಾರುಕಟ್ಟೆಗಳಲ್ಲಿ ಎಳ್ಳು ,ಬೆಲ್ಲ, ಕಬ್ಬು, ಅವರೆ, ಹೂವುಗಳ ವ್ಯಾಪಾರ ಜೋರಾಗಿದೆ. ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗೆ ಸಜ್ಜು ಮಾಡಲಾಗುತ್ತಿದೆ.
ಧನುರ್ಮಾಸದ ಕಡೆಯ ದಿನವಾದ ಮಂಗಳವಾರ ಸಂಕ್ರಾಂತಿ ಬಂದಿದೆ. ಎರಡು ದಿನ ಮುಂಚಿತವಾಗಿಯೇ ಕೆ.ಆರ್.ಮಾರುಕಟ್ಟೆ ಸೇರಿ ಪ್ರಮುಖ ಮಾರುಕಟ್ಟೆಗಳಲ್ಲಿ, ಕಪ್ಪು, ಕೆಂಪು ಕಬ್ಬು ರಾಶಿ ಕಂಡುಬಂದಿದೆ.ಎಲ್ಲ ಬಡಾವಣೆಗಳಲ್ಲೂ ಕಬ್ಬಿನ ಜಲ್ಲೆ , ಗೆಣಸು ,ಕಡಲೆಕಾಯಿ ,ಅವರೆಕಾಯಿ ರಾಶಿ ,ಎಲಚೆ ಹಣ್ಣು ,ನೆಲ್ಲಿಕಾಯಿ ,ಸೇರಿಹಬ್ಬದ ಪರಿಕರಗಳ ವ್ಯಾಪರ ಭರಾಟೆ ನಡೆದಿದೆ.
ಬೆಂಗಳೂರಿನ ಸುತ್ತಮುತ್ತಲ ರೈತರು ಕಬ್ಬನ್ನು ಲಾರಿಗಳಲ್ಲಿ ತಂದು ಕೆ.ಆರ್ ಮಾರುಕಟ್ಟೆ ಸುತ್ತಮುತ್ತ ರಾಶಿ ಹಾಕಿಕೊಂಡು ಮಾರಾಟ ಮಾಡುತ್ತಿದ್ದಾರೆ. ಭಾನುವಾರ ಗಾಂಧೀ ಬಜಾರ್ ನಲ್ಲಿ ಮಹಿಳೆಯರು ಸಂಕ್ರಾಂತಿ ಎಳ್ಳುಬೆಲ್ಲ, ಅಲಂಕೃತ ಪುಟ್ಟ ಮಡಿಕೆ ,ಕುಡಿಕೆ ಕೊಳ್ಳುವಲ್ಲಿ ನಿರತರಾಗಿದ್ದು ಕಂಡುಬಂತು.
ಮಲ್ಲೇಶ್ವರಂ, ಗಾಂಧೀ ಬಜಾರ್, ಯಶವಂತಪುರ ರಾಜಾಜಿನಗರ, ಜಯನಗರ ಚಾಮರಾಜಪೇಟೆ, ಚಿಕ್ಕಪೇಟೆಗಳ ಬೀದಿಗಳಲ್ಲಿ ಸಂಕ್ರಾಂತಿಗಾಗಿ ಮಳಿಗೆಗಳು ತೆರೆದುಕೊಂಡಿವೆ .100 ಗ್ರಾಂ ನಿಂದ ಹಿಡಿದು 2 ಕೆಜಿವರೆಗೆ ಎಳ್ಳು, ಬೆಲ್ಲ, ಪುಟಾಣಿ ಕೊಬ್ಬರಿ ಮಿಶ್ರಿತ ಪೊಟ್ಟಣ ಮಾರಾಟವಾಗುತ್ತಿದೆ. ಇದಕ್ಕೆ 275 – 300 ರೂ.ವರೆಗೆ ಬೆಲೆಯಿದೆ. ಸಕ್ಕರೆ, ಬೆಲ್ಲದ ಅಚ್ಚುಗಳನ್ನು ಮಾರಾಟ ಮಾಡಲಾಗುತ್ತಿದೆ.
ಕಡಲೆಕಾಯಿ ಕೇಜಿಗೆ ರೂ 60- ರೂ 80 ದರವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕಬ್ಬಿಗೆ ಬೇಡಿಕೆ, ಬೆಲೆ ಹೆಚ್ಚಾಗಿದೆ. ಮಳೆ ಸೇರಿದಂತೆ ಇತರೆ ಕಾರಣದಿಂದ ಮಾರುಕಟ್ಟೆಯಲ್ಲಿ ಕಬ್ಬಿನ ಪ್ರಮಾಣ ಕಡಿಮೆಯಾಗಿದ್ದು, ಒಂದು ಕಬ್ಬಿನ ಬೆಲೆ ರೂ 80 -100ಆಗಿದೆ .
ಇನ್ನು, ಸಂಕ್ರಾಂತಿ ಪ್ರಯುಕ್ತ ನಗರದ ವಿವಿಧೆಡೆ ಗೋಪೂಜೆ, ದೇವರ ಆರಾಧನೆ, ಮಹಿಳೆಯರಿಗೆ ರಂಗೋಲಿ ಸ್ಫರ್ಧೆ , ಮಕ್ಕಳಿಗಾಗಿ ಕ್ರೀಡಾ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಸಾಮೂಹಿಕವಾಗಿ ಬೆಂಗಳೂರಲ್ಲಿ ತಮಿಳು ಸಂಸ್ಕೃತಿಯ ಪೊಂಗಲ್ ಮಾಡುವ ಆಚರಣೆ ನಡೆಯಲಿದೆ. ಜೊತೆಗೆ ಜಯನಗರದ ಕನಕನಪಾಳ್ಯ ,ಗವಿಪುರ ಗುಟ್ಟಳ್ಳಿ ಸೇರಿ ವಿವಿಧೆಡೆ ಗೋವಿನ ಪೂಜೆ, ಕಿಚ್ಚು ಹಾಯಿಸುವ ಸಂಪ್ರದಾಯ ಆಚರಣೆಯಾಗಲಿದೆ.