ಅವರು ಕಾಡಿನ ಮಕ್ಕಳು, ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೂ ಮೊದಲಿನಿಂದಲೂ ಕಾಡಿನಲ್ಲಿಯೇ ವಾಸ ಮಾಡುತ್ತಿದ್ದಾರೆ. ಅವರೇ ಸೋಲಿಗರು. ಇಂದಿಗೂ ಸೋರುವ ಗುಡಿಸಲಿನಲ್ಲಿಯೇ ಅವರ ವಾಸ. ಇಂತಹ ಮನೆ ಇಲ್ಲದವರಿಗೆ ಸೂರನ್ನು ಕಲ್ಪಿಸುವ ಉದ್ದೇಶದಿಂದ ಸರ್ಕಾರ ಹೊಸ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ಅದುವೇ ಸಿದ್ದು ನಿವಾಸ.
ಚಾಮರಾಜನಗರ ಜಿಲ್ಲೆಯ ಅರಣ್ಯದ ಅಂಚಿನಲ್ಲಿ ಸುಮಾರು 32 ಸಾವಿರಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳು ಜೀವನ ಮಾಡುತ್ತಿವೆ. ಬಹುತೇಕ ಸೋಲಿಗರು ವಾಸ ಮಾಡ್ತಿರುವ ಮನೆಗಳು ಸೋರುತ್ತಿವೆ. ಮಣ್ಣಿನ ಗೋಡೆಯ ಮನೆಗಳು ಹಾಗೂ ಜೋಪುಡಿಗಳಲ್ಲಿ ಇಂದಿಗೂ ಕೂಡ ಸೋಲಿಗರು ಜೀವನ ಸಾಗಿಸುತ್ತಿದ್ದಾರೆ.ಇಷ್ಟು ವರ್ಷ ರಾಜ್ಯ ಸರ್ಕಾರ ಜೇನು ಕುರುಬರಿಗೆ ಮಾತ್ರ 4.50 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗುತ್ತಿತ್ತು.
ಆದರೆ ಚಾಮರಾಜನಗರದಲ್ಲಿ ಜೇನು ಕುರುಬ ಸಮುದಾಯಕ್ಕಿಂತ ಸೋಲಿಗರು ಜೀವಿಸುತ್ತಿದ್ದಾರೆ. ಇತರ ಸಮುದಾಯದ ಸೋಲಿಗರಿಗೂ ಕೂಡ ಮನೆ ಕಟ್ಟಿಕೊಡಲೂ ಜಿಲ್ಲಾಡಳಿತ ಪ್ಲ್ಯಾನ್ ಮಾಡಿದ್ದು, ಸರ್ಕಾರಕ್ಕೆ 2995 ಮನೆ ನಿರ್ಮಿಸುವ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿದೆ.
ಈ ಬಗ್ಗೆ ಜಿಲ್ಲಾಡಳಿತ ಸರ್ವೇ ಕಾರ್ಯ ನಡೆಸಿದೆ. ಈ ವೇಳೆ 243 ಕುಟುಂಬಗಳಿಗೆ ನಿವೇಶನ ಕೂಡ ಇಲ್ಲದಿರುವುದು ಕಂಡು ಬಂದಿದೆ. ಅಂತಹ ಕುಟುಂಬಗಳಿಗೂ ಕೂಡ ನಿವೇಶನದ ಜೊತೆಗೆ ಮನೆ ನಿರ್ಮಿಸಿ ಕೊಡಲು ನಿರ್ಧಾರ ಮಾಡಿದೆ.
ಈ ಯೋಜನೆಗೆ ಒಂದು ಮನೆಗೆ 5 ಲಕ್ಷದಂತೆ 3 ಸಾವಿರ ಮನೆಗಳಿಗೆ 150 ಕೋಟಿ ರೂ. ಅಂದಾಜು ವೆಚ್ಚವಾಗಲಿದೆ. ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.ಈ ಯೋಜನೆಗೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಕೂಡ ಕೈ ಜೋಡಿಸಿದ್ದಾರೆ. ಅಲ್ಲದೇ ಸರ್ಕಾರ ಅನುಮೋದನೆ ಕೊಟ್ಟರೆ ಈ ಯೋಜನೆಗೆ ಸಿದ್ದು ನಿವಾಸ ಯೋಜನೆ ಎಂದು ಹೆಸರಿಡಲೂ ಪ್ಲಾನ್ ಮಾಡಿದ್ದಾರೆ.