ಬೆಂಗಳೂರು: ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರ ಬಿಡುಗಡೆಗೆ ಹೈಕೋರ್ಟ್ ಸೂಚಿಸಿದೆ. ಇದರಿಂದ ರಾಜ್ಯದ ಗೃಹ ಸಚಿವರು, ಬೆಳಗಾವಿಯ ಪೊಲೀಸ್ ಅಧಿಕಾರಿಗಳಿಗೆ ಒಂದು ರೀತಿ ಮುಖಭಂಗ ಆಗಿದೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಮತ್ತು ಗೃಹಸಚಿವರಿಗೆ ಅಧಿಕಾರದಲ್ಲಿ ಮುಂದುವರೆಯಲು ನೈತಿಕತೆ ಇಲ್ಲ ಎಂದರಲ್ಲದೆ, ರಾಜ್ಯದಲ್ಲಿ ಕೆಲವು ವಿಭಾಗಗಳಲ್ಲಿ ಪೊಲೀಸ್ ಗೂಂಡಾಗಿರಿ ಮೂಲಕ ಹತ್ತಿಕ್ಕುವ ಕೆಲಸ ನಡೆದಿದೆ ಎಂದು ಟೀಕಿಸಿದರು.
ರಾಜ್ಯ ಸರಕಾರದ ವೈಫಲ್ಯಗಳನ್ನು ಯಾರು ಟೀಕಿಸುತ್ತಾರೋ, ಯಾರು ಚರ್ಚಿಸುತ್ತಾರೋ ಅವರ ವಿರುದ್ಧವಾಗಿ ಮೊಕದ್ದಮೆಗಳನ್ನು ಹಾಕುತ್ತಿದ್ದಾರೆ. ಅಲ್ಲದೆ ಹಲ್ಲೆ ಮಾಡುತ್ತಾರೆ. ಜೀವ ಬೆದರಿಕೆ ಹಾಕುತ್ತಿದ್ದಾರೆ. ಹೈಕೋರ್ಟಿನ ಆದೇಶವನ್ನು ಬಿಜೆಪಿ ಸ್ವಾಗತಿಸುತ್ತದೆ. ಪರಮೇಶ್ವರ್ ಅವರಿಗೆ ಅಧಿಕಾರದಲ್ಲಿ ಮುಂದುವರೆಯಲು ನೈತಿಕತೆ ಇಲ್ಲ ಎಂದು ತಿಳಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯುವ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಇತರರು ವಿಧಾನಪರಿಷತ್ತಿನಲ್ಲಿ ಬಿಜೆಪಿಯ ಸಿ.ಟಿ.ರವಿರವರು ಮಾತನಾಡುವ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿ.ಟಿ.ರವಿರವರನ್ನು ಅವಮಾನಿತರನ್ನಾಗಿ ಮಾಡಿದ್ದರು. ಆಗ ಇಡೀ ರಾಜ್ಯದಲ್ಲಿ ನಿಮ್ಮ ಸರಕಾರ ವಿಫಲವಾಗಿದೆ. ಅಪರಾಧಿ ಸ್ಥಾನದಲ್ಲಿ ನಿಂತಿದ್ದೀರಿ. ಫ್ರಸ್ಟ್ರೇಟ್ ಆಗಿ ಮಾತನಾಡುತ್ತಿದ್ದೀರಿ ಎಂಬ ಪದ ಉಪಯೋಗಿಸಿದ್ದನ್ನು ತಿರುಚಿದ್ದಾರೆ. ಅವರ ಕಡೆಯ ಗೂಂಡಾಗಳನ್ನು ಕರೆಸಿ ಸುವರ್ಣಸೌಧದಲ್ಲಿ ಸಿ.ಟಿ.ರವಿರವರ ಮೇಲೆ ಹಲ್ಲೆ ಮಾಡಿದ್ದಾಗಿ ವಿವರಿಸಿದರು.
ಸಿ.ಟಿ.ರವಿರವರು ಕೆಟ್ಟ ರೀತಿಯಲ್ಲಿ ಮಾತನಾಡಿದ್ದನ್ನು ಕೇಳಿಸಿಕೊಂಡಿಲ್ಲ,ಅವರು ಮಾತನಾಡಿದ್ದನ್ನು ಅವರವರ ಆತ್ಮಾವಲೋಕನಕ್ಕೆ ಬಿಟ್ಟಿರುವುದಾಗಿ ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದ್ದರು. ಆದರೂ ರವಿರವರು ಬೇರೆ ಸಂದರ್ಭದಲ್ಲಿ ಹೊರಕ್ಕೆ ಬಂದಾಗ ಪೊಲೀಸರು ಏಕಾಏಕಿ ಬಂಧಿಸಿ ಖಾನಾಪುರ ಪೊಲೀಸ್ ಠಾಣೆಗೆ ಕರೆದೊಯ್ದು ಅವರ ಮೇಲೆ ಗಂಭೀರವಾದ ಪ್ರಕರಣಗಳನ್ನು ಹೂಡಿ, ಇವತ್ತು ನ್ಯಾಯಾಲಯಕ್ಕೆ ಕರೆತರುವ ಪ್ರಯತ್ನ ಮಾಡಿದ್ದಾರೆ ಎಂದರು.
ಇದರ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಿದೆ. ರಾಜ್ಯ ಹೈಕೋರ್ಟಿನಲ್ಲಿ ರವಿರವರ ಬಂಧನ ಮತ್ತು ಅವರ ಮೇಲಿನ ಮೊಕದ್ದಮೆಗಳನ್ನು ಪ್ರಶ್ನಿಸಿ, ಬಿಜೆಪಿ ನ್ಯಾಯಾಲಯದ ಮೊರೆ ಹೋಗಿತ್ತು. ನ್ಯಾಯಾಲಯವು ಸಿ.ಟಿ.ರವಿಯವರಿಗೆ ಮಧ್ಯಂತರ ಜಾಮೀನನ್ನು ನೀಡಿದೆ. ಸಿ.ಟಿ.ರವಿಯವರನ್ನು ಬೆಂಗಳೂರಿಗೆ ಕರೆತರುವ ಜಾಗದಿಂದಲೇ ಬಿಡುಗಡೆ ಮಾಡಲು ತಿಳಿಸಿದ್ದು, ಹೈಕೋರ್ಟ್ ಸರಕಾರಕ್ಕೆ ಕಪಾಳಮೋಕ್ಷವನ್ನು ಮಾಡಿದೆ ಎಂದು ವಿಶ್ಲೇಷಿಸಿದರು.