ತುಮಕೂರು – ನೆಲಮಂಗಲ ನಡುವಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಎರಡು ಟೋಲ್ ಪ್ಲಾಜಾಗಳಿವೆ. ಆದರೆ ಇನ್ನು ಕೆಲವೇ ತಿಂಗಳಿನಲ್ಲಿ ಈ ಎರಡೂ ಟೋಲ್ ಪ್ಲಾಜಾಗಳು ನೆಲಸಮ ಆಗಲಿವೆ. ತುಮಕೂರು ರಸ್ತೆಯಲ್ಲಿರುವ ಚೊಕ್ಕೇನಹಳ್ಳಿ ಮತ್ತು ಕುಲುಮೇಪಾಳ್ಯ ಟೋಲ್ ಪ್ಲಾಜಾಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಇದರಿಂದ ವಾಹನ ಸವಾರರ ಸಮಯ ಉಳಿತಾಯವಾಗಲಿದೆ. ಆದರೆ ಟೋಲ್ ಶುಲ್ಕ ಪಾವತಿಸುವುದರಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಈ ಎರಡೂ ಟೋಲ್ ಪ್ಲಾಜಾಗಳನ್ನು ಮುಚ್ಚಿ, ಕೇವಲ ಒಂದು ಟೋಲ್ ಪ್ಲಾಜಾ ನಿರ್ಮಾಣ ಮಾಡಲು NHAI ಅಧಿಕಾರಿಗಳು ನಿರ್ಧರಿಸಿದ್ದಾರೆ. ನೆಲಮಂಗಲ – ತುಮಕೂರು ನಡುವೆ ಈಗ ಇರುವ ನಾಲ್ಕು ದಾರಿಯ ರಾಷ್ಟ್ರೀಯ ಹೆದ್ದಾರಿಯನ್ನು ಎಕ್ಸ್ಪ್ರೆಸ್ವೇ ಆಗಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಎಕ್ಸ್ಪ್ರೆಸ್ವೇ ನಿರ್ಮಾಣವಾದ ಬಳಿಕ ಈಗ ಇರುವ ಎರಡೂ ಟೋಲ್ ಪ್ಲಾಜಾಗಳನ್ನು ಬಂದ್ ಮಾಡಲಾಗುತ್ತದೆ ಎಂಬ ಸುದ್ದಿ ತಿಳಿದುಬಂದಿದೆ.
ಈಗ ಇರುವ ನಾಲ್ಕು ಪಥಗಳ ರಸ್ತೆಯನ್ನು ಆರು ಪಥಗಳಿಗೆ ವಿಸ್ತರಣೆ ಕೆಲಸ ನಡೆಯುತ್ತಿದ್ದು, 2025ರ ಅಂತ್ಯದ ವೇಳೆಗೆ ಕಾಮಗಾರಿ ಮುಗಿಯುವ ನಿರೀಕ್ಷೆ ಮಾಡಲಾಗಿದೆ. ಎಕ್ಸ್ಪ್ರೆಸ್ವೇ ನಿರ್ಮಾಣವಾದ ಬಳಿಕ ಚೊಕ್ಕೇನಹಳ್ಳಿ ಮತ್ತು ಕುಲುಮೇಪಾಳ್ಯ ಟೋಲ್ ಪ್ಲಾಜಾ ಮುಚ್ಚಿ, ರಾಯರಪಾಳ್ಯದಲ್ಲಿ ಹೊಸ ಟೋಲ್ ಪ್ಲಾಜಾ ಸ್ಥಾಪನೆ ಮಾಡಲು NHAI ಯೋಜಿಸಿದೆ. 2004ರಲ್ಲಿ ಈಗ ಕಾರ್ಯ ನಿರ್ವಹಿಸುತ್ತಿರುವ ಎರಡೂ ಟೋಲ್ ಪ್ಲಾಜಾಗಳನ್ನು ನಿರ್ಮಿಸಲಾಗಿತ್ತು. ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ತೆರಳುವ ವಾಹನ ಸವಾರರು ಕುಲುಮೇಪಾಳ್ಯ, ಚಿಕ್ಕೇನಹಳ್ಳಿ, ತುಮಕೂರು ಸಿರಾ ನಡುವೆ ಇರುವ ಕರಜೀವನಹಳ್ಳಿ ಮತ್ತು ಹಿರಿಯೂರು ಚಿತ್ರದುರ್ಗ ನಡುವೆ ಇರುವ ಗುಯಿಲಾಳು ಟೋಲ್ಪ್ಲಾಜಾದಲ್ಲಿ ಹಣ ಪಾವತಿ ಮಾಡಬೇಕು. ಎಕ್ಸ್ಪ್ರೆಸ್ವೇ ನಿರ್ಮಾಣವಾದ ಬಳಿಕ ಒಂದು ಟೋಲ್ ಪ್ಲಾಜಾ ಕಡಿಮೆಯಾಗಲಿದೆ. ಕ್ಸ್ಪ್ರೆಸ್ವೇ ನಿರ್ಮಾಣವಾದ ಬಳಿಕ ಯಾರೂ ಕೂಡ ಟೋಲ್ ಪಾವತಿ ಮಾಡದೇ ಹೆದ್ದಾರಿಗೆ ಪ್ರವೇಶಿಸುವುದು ಸಾಧ್ಯವಿಲ್ಲ. ಅತಿಕ್ರಮವಾಗಿ ಪ್ರವೇಶ ಮಾಡಿದರೆ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೆಲಮಂಗಲ ಟೋಲ್ ಪ್ಲಾಜಾ ವಿರುದ್ದ ದೂರು ನೆಲಮಂಗಲ ಟೋಲ್ ಪ್ಲಾಜಾದಲ್ಲಿ ವಾಹನ ಸವಾರರಿಗೆ ಫಾಸ್ಟ್ ಟ್ಯಾಗ್ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು, ಟೋಲ್ ಪ್ಲಾಜಾ ಮೂಲಕ ಪ್ರಯಾಣಿಸದೇ ಇದ್ದರೂ ಹಣ ಕಡಿತವಾಗುತ್ತಿದೆ ಎಂದು ದೂರಲಾಗಿದೆ. ಈ ಸಂಬಂಧ ಅಧಿಕಾರಿಗಳು ಸಚಿವಾಲಯಕ್ಕೆ ಮಾಹಿತಿ ನೀಡಿದ್ದು ಗುತ್ತಿಗೆದಾರನನ್ನು ಬದಲಾಯಿಸಿದ್ದಾರೆ. ಹೊಸ ಟೋಲ್ ನಿರ್ಮಾಣವಾದ ಬಳಿಕ ಎಲ್ಲಾ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.