ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ತನಿಕೆ ನಡೆಸಲು ಆಂಧ್ರಪ್ರದೇಶ ಸರ್ಕಾರವು 9 ಸದಸ್ಯರ ತಂಡವನ್ನು ರಚಿಸಿದೆ. ಗುಂಟೂರು ರೇಂಜ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಸರ್ವಶ್ರೇಷ್ಠ ತ್ರಿಪಾಠಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ತಿರುಮಲದಲ್ಲಿ ಹಿಂದಿನ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ನಡೆದಿರುವ ಇತರ ಅಕ್ರಮಗಳ ಬಗ್ಗೆಯೂ ಎಸ್ಐಟಿ ತನಿಖೆ ನಡೆಸಲಿದೆ.
ಸರ್ವಶ್ರೇಷ್ಠ ತ್ರಿಪಾಠಿ, 2006ರ ಬ್ಯಾಚ್ನ ಭಾರತೀಯ ಪೊಲೀಸ್ ಸೇವೆ ಅಧಿಕಾರಿ, ಈ ಹಿಂದೆ ಸಂಯೋಜಿತ ಗುಂಟೂರು ಮತ್ತು ಕೃಷ್ಣ ಜಿಲ್ಲೆಗಳಿಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್ಪಿ) ಸೇವೆ ಸಲ್ಲಿಸಿದ್ದರು. ತ್ರಿಪಾಠಿಯ ಹೊರತಾಗಿ, ಎಸ್ಐಟಿ ತಂಡವು ವಿಶಾಖಪಟ್ಟಣಂ ರೇಂಜ್ಗೆ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿರುವ ಗೋಪಿನಾಥ್ ಜಟ್ಟಿ, ಐಪಿಎಸ್ ಸೇರಿದಂತೆ ಇತರ ಪ್ರಮುಖ ಸದಸ್ಯರನ್ನು ಒಳಗೊಂಡಿದೆ.
ತಿರುಪತಿ ತಯಾರಿಕೆಯಲ್ಲಿ ಹಂದಿ, ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಇತರರ ವಿರುದ್ಧ ಹೈದರಾಬಾದ್ನಲ್ಲಿ ದೂರು ದಾಖಲಿಸಲಾಗಿದೆ.
ವಿಶ್ವವಿಖ್ಯಾತ ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂದು ಸ್ವತಃ ಆಂಧ್ರ ಪ್ರದೇಶ ಮುಖ್ಯಮಂತ್ರಿ ಆರೋಪ ಮಾಡಿದ್ದರು. ಅಲ್ಲದೆ ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವುದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ.