ಪ್ರಾಣಿಗಳ ಕೊಬ್ಬು ಬಳಸಿ ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆ ಮಾಡಲಾಗುತ್ತಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ತಿರುಪತಿಯ ಭಕ್ತರ ನಂಬಿಕೆಗೆ ಚಂದ್ರಬಾಬು ನಾಯ್ಡು ಅವರ ಹೇಳಿಕೆ ಧಕ್ಕೆ ತಂದಿದೆ ಎಂದು ಟಿಟಿಡಿ ಅಧಿಕಾರಿಗಳು ವಾದಿಸಿದ್ದರು. ಟಿಟಿಡಿ ಮಾಜಿ ಮುಖ್ಯಸ್ಥರು ಚಂದ್ರಬಾಬು ನಾಯ್ಡು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ಎಚ್ಚರಿಕೆ ನೀಡಿದ್ದರು. ಆದರೆ, ಚಂದ್ರಬಾಬು ನಾಯ್ಡು ಅವರ ಆರೋಪ ಸತ್ಯ ಎಂಬುದು ಇದೀಗ ಬಂದಿರುವ ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ.
ಪ್ರಾಣಿಗಳ ಕೊಬ್ಬು ಬಳಸಿ ಲಡ್ಡು ತಯಾರಿಸಿದ್ದಾಗಿ ಟಿಟಿಡಿಯಿಂದ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಅಧಿಕೃತ ಸ್ಪಷ್ಟನೆ ನೀಡಲಾಗಿದೆ. ಲ್ಯಾಬ್ ವರದಿ ಬಿಡುಗಡೆ ಮಾಡಿ ಟಿಟಿಡಿ ಆಡಳಿತ ಮಂಡಳಿಯಿಂದ ಸ್ಪಷ್ಟನೆ ನೀಡಲಾಗಿದೆ. ತಿರುಪತಿಯ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು ಇರುವುದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ. ಇದರಲ್ಲಿ ಹಂದಿಯ ಕೊಬ್ಬು, ದನದ ಕೊಬ್ಬು, ಪಾಮಾಯಿಲ್, ಸೋಯಾಬಿನ್, ಸೂರ್ಯಕಾಂತಿ ಎಣ್ಣೆ, ಮೆಕ್ಕೆ ಜೋಳ ಎಣ್ಣೆ ಬೆರೆಸಿದ ಕಡಿಮೆ ಗುಣಮಟ್ಟದ ತುಪ್ಪ ಬಳಕೆ ಮಾಡಲಾಗುತ್ತಿದೆ ಎಂದು ಖಚಿತವಾಗಿದೆ.
ತಿರುಪತಿ ಲಡ್ಡುವನ್ನು ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿತರಿಸಲಾಗುತ್ತದೆ. ಈ ದೇವಸ್ಥಾನವನ್ನು ತಿರುಮಲ ತಿರುಪತಿ ದೇವಸ್ಥಾನಮ್ ನಡೆಸುತ್ತದೆ. ತಿರುಪತಿ ಪ್ರಸಿದ್ದಿ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಲಡ್ಡುಗಳನ್ನು ಪ್ರಸಾದವಾಗಿ ವಿತರಿಸಲು ಗೋಮಾಂಸ ಟ್ಯಾಲೋ, ಮೀನಿನ ಎಣ್ಣೆ ಮತ್ತು ಪಾಮ್ ಆಯಿಲ್ ಅನ್ನು ಬಳಸಲಾಗುತ್ತಿದೆ ಎಂದು ಲ್ಯಾಬ್ ಪರೀಕ್ಷೆಯ ವರದಿ ಬಹಿರಂಗಪಡಿಸಿದೆ.
ಹಿಂದಿನ ವೈಎಸ್ಆರ್ಸಿಪಿ ಸರ್ಕಾರದ ಅವಧಿಯಲ್ಲಿ ಪ್ರಸಿದ್ಧ ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಬುಧವಾರ ಆರೋಪಿಸಿದ್ದರು. ಆದರೆ, ವೈಎಸ್ಆರ್ಸಿಪಿ ಈ ಆರೋಪವನ್ನು ತಳ್ಳಿ ಹಾಕಿತ್ತು.