ಪ್ರತಿ ವರ್ಷ ನವೆಂಬರ್ 19 ರಂದು ಅಂತಾರಾಷ್ಟ್ರೀಯ ಪುರುಷರ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ವಿಶೇಷವಾಗಿ ಪುರುಷರ ಜೀವನ, ಸಾಧನೆಗಳು ಮತ್ತು ಕುಟುಂಬದ ಜವಾಬ್ದಾರಿ ಹಾಗೂ ಪುರುಷರ ಸಮಸ್ಯೆಗಳ ಬಗ್ಗೆ ಮೂಲಭೂತ ವಿಚಾರಗಳ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಈ ದಿನವನ್ನು ಆಚರಿಸಲಾಗುತ್ತದೆ. ನಿಮ್ಮ ಬದುಕಿನಲ್ಲಿ ಅಪ್ಪನಾಗಿ, ಸಹೋದರನಾಗಿ, ಸಂಗಾಂತಿಯಾಗಿ, ಮಗನಾಗಿ ವಿವಿಧ ರೀತಿಯಲ್ಲಿ ವಿಶೇಷ ಕಾಳಜಿ ವಹಿಸುವ ನಿಮ್ಮವರಿಗೆ ಕೃತಜ್ಞತೆಯನ್ನು ತೋರುವ ವಿಶೇಷ ದಿನವಾಗಿದೆ.
ವಿಶ್ವ ಪುರುಷರ ದಿನದ ಇತಿಹಾಸ:
ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿನ ವೆಸ್ಟ್ ಇಂಡೀಸ್ ವಿಶ್ವವಿದ್ಯಾಲಯದ ಇತಿಹಾಸದ ಪ್ರಾಧ್ಯಾಪಕ ಡಾ ಜೆರೋಮ್ ಟೀಲುಕ್ಸಿಂಗ್ ಅವರು ತಮ್ಮ ತಂದೆಯ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ 1999 ರಲ್ಲಿ ಅಂತರರಾಷ್ಟ್ರೀಯ ಪುರುಷರ ದಿನವನ್ನು ಮೊದಲ ಬಾರಿಗೆ ಆಚರಿಸಿದರು. ಈ ದಿನದಂದು ಪುರುಷರು ಮತ್ತು ಹುಡುಗರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಅರಿವು ಮೂಡಿಸಲಾಗುತ್ತದೆ.
ವಿಶ್ವ ಪುರುಷರ ದಿನದ ಮಹತ್ವ ಮತ್ತು ಆಚರಣೆ:
ಈ ದಿನವು ಪುರುಷರ ಯೋಗಕ್ಷೇಮ ಮತ್ತು ಮಾನಸಿಕ, ದೈಹಿಕ ಆರೋಗ್ಯ, ಲೈಂಗಿಕ ಸಮಸ್ಯೆ ಬಗ್ಗೆ ಅರಿವು ಮೂಡಿಸುವುದು ಮತ್ತು ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಒಂದು ಕುಟುಂಬದ ಮುಖ್ಯಸ್ಥನಾಗಿ ಆತನಿಗೆ ಕುಟುಂಬದ ಮೇಲಿರುವ ಪ್ರೀತಿ, ಜವಾಬ್ದಾರಿಗಳು, ಎದುರಿಸುವ ಸಮಸ್ಯೆಗಳು ಇವೆಲ್ಲವುಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳುವಳಿಕೆ ನೀಡುವ ವಿಶೇಷ ದಿನವಾಗಿದೆ.