ಹೈದರಾಬಾದ್ನ ಚಿತ್ರಮಂದಿರದಲ್ಲಿ ಪುಷ್ಪ 2 ಚಿತ್ರದ ಪ್ರೀಮಿಯರ್ ಶೋ ವೇಳೆ ಅಭಿಮಾನಿಗಳ ಜನಸಾಗರವೇ ಹರಿದುಬಂದಿತ್ತು. ಆ ಜನಸಾಗರದಲ್ಲಿ ಸಿನಿಮಾ ನೋಡಲು ಬಂದ ಮಹಿಳೆಯೊಬ್ಬಳು ಕಾಲ್ತುಳಿತಕ್ಕೆ ಸಾವನ್ನಪ್ಪಿದ್ದಳು. ಮತ್ತು ಅವರ ಮಗನ ಆರೋಗ್ಯ ಪರಿಸಸ್ಥಿತಿ ಗಂಭೀರವಾಗಿದೆ. ಇದೀಗ ಆ ಮೃತಳ ಕುಟುಂಬಕ್ಕೆ ನಟ ಅಲ್ಲು ಅರ್ಜುನ್ ಶುಕ್ರವಾರ ₹ 25 ಲಕ್ಷ ನೆರವು ಘೋಷಿಸಿದ್ದಾರೆ.
ಈ ಕುರಿತ ವಿಡಿಯೊವನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಈ ದುರ್ಘಟನೆ ಬಹಳ ಬೇಸರ ತರಿಸಿದೆ. ಮೃತರ ಕುಟುಂಬದವರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಕುಟುಂಬದ ಸದಸ್ಯರನ್ನು ವೈಯಕ್ತಿಕವಾಗಿ ಭೇಟಿಯಾಗುತ್ತೇನೆ’ ಎಂದು ಅವರು ಹೇಳಿದ್ದಾರೆ. ಸಂಧ್ಯಾ ಚಿತ್ರಮಂದಿರದಲ್ಲಿ ಬುಧವಾರ ಪ್ರೀಮಿಯರ್ ಶೋ ವೇಳೆ ಜನದಟ್ಟಣೆ ಹೆಚ್ಚಿದ ಪರಿಣಾಮ ಉಸಿರುಗಟ್ಟಿ ರೇವತಿ ಎಂಬುವವರು ಮೃತಪಟ್ಟಿದ್ದರು. ಅವರ ಮಗ ಶ್ರೀತೇಜ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕನ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಭರಿಸುವುದಾಗಿ ನಟ ತಿಳಿಸಿದ್ದಾರೆ. ಸಿನಿಮಾ ಮಹಿಳೆಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಪೊಲೀಸರು ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಮತ್ತು ಚಿತ್ರಮಂದಿರದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.