ಸಂಚಾರಿ ಪೊಲೀಸರು ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸುವ ಜೊತೆಗೆ ಹಲ್ಲೆ ನಡೆಸಿದ್ದಾಗಿ ಆರೋಪಿಸಿ ಟ್ರಕ್ ಚಾಲಕರೊಬ್ಬರು ಬೃಹತ್ ಕಂಟೈನರ್ ಟ್ರಕ್ ಅನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ವಿಚಿತ್ರವಾಗಿ ಪ್ರತಿಭಟಿಸಿದ ಪರಿಣಾಮ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ವೈಟ್ ಫೆದರ್ನಿಂದ ಚಂದಾಪುರ, ಬೊಮ್ಮನಹಳ್ಳಿ ಮಾರ್ಗ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಜಾಮ್ ಉಂಟಾಗಿ ಟ್ರಾಫಿಕ್ ಪೊಲೀಸರಿಗೆ ಕಿರಿಕಿರಿ ಉಂಟಾಗಿತ್ತು. ಈ ಘಟನೆ ಬುಧವಾರ ರಾತ್ರಿ 9.30ಕ್ಕೆ ನಡೆದಿದೆ.
ಸಂಚಾರಿ ಪೊಲೀಸರು 2,000 ರೂ. ಪಡೆದಿದ್ದಲ್ಲದೆ ಟ್ರಕ್ ಡ್ರೈವರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿ ಟ್ರಕ್ ಚಾಲಕ ಪ್ರತಿಭಟಿಸಿದ್ದಾನೆ. ನಂತರದಲ್ಲಿ ಇತರ ಕಂಟೈನರ್ಗಳ ಚಾಲಕರೂ ರೊಚ್ಚಿಗೆದ್ದು ಪೊಲೀಸರ ವಿರುದ್ಧ ಘೋಷಣೆ ಕೂಗುತ್ತ ರಸ್ತೆ ತಡೆ ಮಾಡಿದ್ದಾರೆ. ಪಿಇಎಸ್ ಕಾಲೇಜು ಬಳಿ ನೈಸ್ ರಸ್ತೆ, ಸಿಲ್ಕ್ ಬೋರ್ಡ್ ನಿಂದ ಹೊಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿಯಿಂದ ಬೊಮ್ಮನಹಳ್ಳಿ ಮಾರ್ಗ ನೈಸ್ ರಸ್ತೆ ಹಾಗೂ ಸರ್ವಿಸ್ ರಸ್ತೆಗಳನ್ನು ಬ್ಲಾಕ್ ಮಾಡಿ ಹಲವಾರು ಟ್ರಕ್ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಯಿತು.